ನುಲಿಯ ಚಂದಯ್ಯ ಶರಣ ಸಂದೋಹದ ಮೇರುಪರ್ವತ : ಮೋಹನರಾಜ
ಬೀದರ:ಸೆ.೩: ನುಲಿಯ ಚಂದಯ್ಯ ಬಸವಕಲ್ಯಾಣದ ಕೆರೆಯ ಹಿನ್ನೀರ ದಡದಲ್ಲಿ ಬೆಳೆಸ ಸೊಗಸಾದ ಹುಲ್ಲನ್ನು ತಂದು, ಹಗ್ಗ ಹೊಸೆದು ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿಯೇ ಜೀವನ ಸಾಗಿಸುವುದರ ಜೊತೆಗೆ ಜಂಗಮದಾಸೋಹವನ್ನು ಮಾಡುತ್ತಿದ್ದರು. ಬಸವಾದಿ ಶರಣ ಸಂದೋಹದ ಮೇರು ಪರ್ವತ ಚಂದಯ್ಯನವರಾಗಿದ್ದರು ಎಂದು ಮೈಸೂರಿನ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಮೋಹನರಾಜ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಆಯೋಜಿಸಿದ ಶಿವಶರಣ ನುಲಿಯ ಚಂದಯ್ಯನವರ ೯೧೭ನೇ ಜಯಂತಿ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು.
ಚಂದೇಶ್ವರ ಎಂಬ ಅಂಕಿತನಾಮದಡಿಯಲ್ಲಿ ರಚಿಸಿದ ಸುಮಾರು ೪೮ ವಚನಗಳು ಇದುವರೆಗೆ ಲಭಿಸಿವೆ. ಬನವಾಸಿಯ ಮಧುಕೇಶ್ವರ ದೇವಸ್ಥಾನದಲ್ಲಿರುವ ಕಲ್ಲುಮಂಟಪದ ಶಿಲಾಶಾಸನದಲ್ಲಿ ನುಲಿಯ ಚಂದಯ್ಯನವರ ಹೆಸರು ಕೆತ್ತಲಾಗಿದೆ. ಆದಾಯಕ್ಕಿಂತ ಹೆಚ್ಚು ಹಣ ಬಂದರೆ ಅದನ್ನು ಚಂದಯ್ಯ ಸ್ವೀಕರಿಸದೆ “ನೇಮದ ಕೂಲಿಯಂದಿನ ನಿತ್ಯ ನೇಮದಲ್ಲಿ ಸಂದಿಲ್ಲದಿರಬೇಕು, ನೇಮದ ಕೂಲಿಯ ಬಿಟ್ಟು, ಹೇಮದಾಸೆಗೆ ಕಾಮಿಸಿ, ದ್ರವ್ಯವ ಹಿಡಿವಡೆ ತಾ ಮಾಡುವ ಸೇವೆ ನಷ್ಟವಯ್ಯ” ಎಂದು ಹೇಳುತ್ತಾರೆ ಎಂದು ವಚನಗಳ ಮೂಲಕ ತಿಳಿಸುತ್ತ ಪ್ರತಿಯೊಬ್ಬರೂ ಕಾಯಕ ಮಾಡಬೇಕು. ‘ಗುರುವಾದಡೂ ಕಾಯಕದಿಂದಲೇ ಮುಕ್ತಿ’ ಎಂದು ತಿಳಿಸಿ ಬಸವೇಶ್ವರರ ಕಾಯಕ ಮತ್ತು ದಾಸೋಹ ಸಿದ್ಧಾಂತ ಮುಂದುವರೆಸಿದ ಕೀರ್ತಿ ನುಲಿಯ ಚಂದಯ್ಯನವರಿಗೆ ಸಲ್ಲುತ್ತದೆ ಎಂದು ಮೋಹನರಾಜ್ ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಭಾಲ್ಕಿಯ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ ನುಲಿಯ ಚಂದಯ್ಯ ಸಮಾಜದ ಕೊರಮ(ಕೊರವ) ಸಮಾಜದ ಬಾಂಧವರು ಸಂಘಟಿತರಾಗಿ ಹೋರಾಟ ಮಾಡಬೇಕು. ಚಂದಯ್ಯನವರ ಕಾಯಕನಿಷ್ಠೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಸರ್ವರಂಗಗಳಲ್ಲೂ ಮುಂಚೂಣಿಗೆ ಬರಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೀದರ ತಹಸಿಲ್ದಾರರಾದ ದಿಲಶಾಡ್ ಮೆಹತ್ ನೆರವೇರಿಸಿದರು. ವೇದಿಕೆ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಜಗನ್ನಾಥ ಮೂರ್ತಿ, ಬೀದರ ಜಿಲ್ಲಾ ಕೊರಮ(ಕೊರವ) ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಡಿ. ಕೊರವ, ಪ್ರಾಧ್ಯಾಪಕ ಶಿವಶರಣಪ್ಪ ಹುಗ್ಗೆಪಾಟೀಲ, ಬಸವಕಲ್ಯಾಣ ಸಿಎಂಸಿ ಸದಸ್ಯ ರಾಮಜಾಧವ, ಕನಕಟ್ಟಾ ಗ್ರಾ.ಪಂ. ಅಧ್ಯಕ್ಷ ಮನೋಜ ಮಾನೆ, ರಾಮ ಚಾಳಕಾಪೂರ, ಸಂಘದ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಬೇಲೂರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಚನ್ನಬಸವ ಹೆಡೆ ನಿರೂಪಿಸಿದರು. ಸಿದ್ರಾಮ ಶಿಂಧೆ ಸ್ವಾಗತಿಸಿದರು. ಸಂಜೀವಕುಮಾರ ಬೇಲೂರ ವಂದಿಸಿದರು. ಇದೇ ವೇಳೆ ಸಮುದಾಯದ ಅತಿ ಹೆಚ್ಚು ಅಂಕಗಳನ್ನು ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ನುಲಿಯ ಚಂದಯ್ಯ ಜಯಂತಿ ಪ್ರಯುಕ್ತ ಕ್ರಿಕೇಟ್ ಟೂರ್ನಾಮೆಂಟ್ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಪ್ರಥಮ ಸ್ಥಾನ ಪಡೆದ ಕನಕಟ್ಟಾ ಕ್ರಿಕೇಟ್ ತಂಡಕ್ಕೆ ಟ್ರೋಫಿ ಹಾಗೂ ರೂ. ೧೧ ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆದ ನೌಬಾದ ಕ್ರಿಕೇಟ್ ತಂಡಕ್ಕೆ ಟ್ರೋಫಿ ಹಾಗೂ ರೂ. ೭ ಸಾವಿರ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಸಮುದಾಯದ ಬಸಪ್ಪ ಭಜಂತ್ರಿ ಗದಗ್ ಅವರು “ಉತ್ತರ ಕರ್ನಾಟಕದ ಕೊರಮ ಸಮುದಾಯ ಒಂದು ಸಾಂಸ್ಕೃತಿಕ ಅಧ್ಯಯನ” ವಿಷಯದ ಮೇಲೆ ಸಂಶೋಧನೆ ಕೈಗೊಂಡ ಪ್ರಯುಕ್ತ ಅವರನ್ನು ಸನ್ಮಾನಿಸಲಾಯಿತು.