ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ
ಚಿಂಚೋಳಿ,ಸೆ.೩- ತಾಲ್ಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ಅಂತವರ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ಯುವ ಘಟಕದ ನೆತೃತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಯಿತು.
ಚಂದಾಪುರ ಪಟ್ಟಣದ ತಾಂಡೂರ ಕ್ರಾಸ್ ನಿಂದ ತಹಸೀಲ್ದಾರ್ ಕಛೇರಿಯವರೆಗೂ ರ‍್ಯಾಲಿ ನಡೆಸಿದ ನಂತರ ಮಾತನಾಡಿದ ಯುವ ಘಟಕದ ಅಧ್ಯಕ್ಷ ಸಚಿನ ಚೌವ್ಹಾಣ ಅವರು, ತಾಲ್ಲೂಕಿನಲ್ಲಿ ಸರಕಾರದಿಂದ ಮಾನ್ಯತೆ ಪಡೆಯದೇ ಮತ್ತು ವೈದ್ಯಕೀಯ ಪದವಿಗಳನ್ನು ಪಡೆಯದೇ ನಕಲಿ ಪ್ರಮಾಣ ಪತ್ರಗಳನ್ನು ಇಟ್ಟುಕೊಂಡು ವೈದ್ಯ ವೃತ್ತಿ ಮಾಡುತ್ತಿರುವವರ ಹಾವಳಿ ಹೆಚ್ಚಾಗುತ್ತಿದೆ. ಇಂತಹ ಖಾಸಗಿ ವೈದ್ಯಕೀಯ ಕೇಂದ್ರಗಳ ಮೇಲೆ ಮತ್ತು ಔಷಧಾಲಯಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ನಕಲಿ ವೈದ್ಯರ ಸರ್ವೇ ನಡೆಸಿದ್ದು ಚಿಂಚೋಳಿ ತಾಲೂಕಿನ ಹಲವೆಡೆ ನಕಲಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದಾರೆ ಅಂತಹ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಂಘಟನೆ ದೂರು ನೀಡಿದೆ, ನಕಲಿ ವೈದ್ಯರ ದತ್ತಾಂಶವನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ತಾಲ್ಲೂಕಿನ ವ್ಯಾಪ್ತಿಯಲ್ಲಿ ನಕಲಿ ವೈದ್ಯರು ಸಿಕ್ಕುಬಿದ್ದಾಗ ಆರೋಗ್ಯಾಧಿಕಾರಿಗಳು ಅಂತವರ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯಿದೆ (ಕೆಪಿಎಂಇ) ಅನ್ವಯ ಕ್ರಮ ಕೈಗೊಳ್ಳಬೇಕು ಹಾಗೂ ಕಾಯ್ದೆ ಪ್ರಕಾರ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬೇಕು.
ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯಲ್ಲಿ (ಕೆಎಯುಪಿ) ನೋಂದಣಿಯಾದ ವೈದ್ಯರು ಮೃತಪಟ್ಟರೆ ಅಥವಾ ಹೊರ ರಾಜ್ಯ, ವಿದೇಶಗಳಿಗೆ ತೆರಳಿದರೆ ನೋಂದಣಿ ರದ್ದಾಗುತ್ತದೆ. ರದ್ದಾದ ನೋಂದಣಿ ಸಂಖ್ಯೆಯನ್ನು ಬೇರೆಯವರಿಗೆ ನೀಡಲು ಅವಕಾಶವಿಲ್ಲ. ಆದರೆ, ಇಂಥಹ ನೋಂದಣಿ ಸಂಖ್ಯೆಗಳನ್ನು ಬಳಸಿಕೊಂಡು ಕೆಲ ನಕಲಿ ವೈದ್ಯರು ಪ್ರಮಾಣಪತ್ರ ಪಡೆದಿದ್ದಾರೆ ಇಂತಹ ವೈದ್ಯರ ನೋಂದಣಿ ಸಂಖ್ಯೆಯನ್ನು ಕೂಡ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಕೊರೊನಾ ಸಮಯದಲ್ಲಿ ಕೆಲವರು ಕೆಲಸ ಇಲ್ಲದೇ, ಎಂಬಿಬಿಎಸ್ ಪದವಿ ಮುಗಿಸದೇ ಇದ್ದರೂ, ಹಲವು ಜನ ಹಳ್ಳಿಗಳಲ್ಲಿ, ನಗರ ಪ್ರದೇಶಗಳಲ್ಲಿ ಹಾಗೂ ಗಡಿ ಭಾಗದಲ್ಲಿ ಹೆಚ್ಚಾಗಿ ಕ್ಲಿನಿಕ್ ತೆರೆದು ಜನರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇಂತಹ ವೈದ್ಯರ ಕುರಿತು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಸರಕಾರದಿಂದ ಮಾನ್ಯತೆ ಪಡೆದು ಖಾಸಗಿ ಕ್ಲಿನಿಕ್ ನಡೆಸಲು ಪಡೆದಿರುವ ಕೆಪಿಎಂಇ ಸಂಖ್ಯಾ ಫಲಕ ಹಾಗೂ ತಮ್ಮ ವೈದ್ಯಕೀಯ ಶಿಕ್ಷಣದ ವಿವರ ಮತ್ತು ಕ್ಲಿನಿಕ್ ಅಲೋಪಥಿ ಆಗಿದೆಯೇ? ಅಥವಾ ಆಯುರ್ವೇದ ಆಗಿದೆಯೇ? ಎನ್ನುವಂತಹ ಪ್ರತ್ಯೇಕ ನಾಮ ಫಲಕ ಹಾಕುವಂತೆ ಆದೇಶ ಮಾಡಬೇಕು ಎಂದು ಅವರು ಒತ್ತಾಯಿಸಿದರರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಹೀರಾ ಪವಾರ್, ಗುರು ರಾಠೋಡ ಸೇರಿದಂತೆ ಇನ್ನಿತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.