ಅತಿವೃಷ್ಟಿಯಿಂದ ಹಾಳಾದ ರಸ್ತೆಗಳ ಪ್ರಗತಿ ತೃಪ್ತಿಕರವಾಗಿಲ್ಲ:ಪ್ರಗತಿ ಪರಿಶೀಲನೆ ಮಾಡಿದ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಂದ ಆಕ್ಷೇಪ
ಕಲಬುರಗಿ:ಸೆ.2: ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪ್ರಗತಿಪಥ ಹಾಗೂ ಕಲ್ಯಾಣಪಥ ಕಾರ್ಯಕ್ರಮಗಳು ಕೇವಲ ರಸ್ತೆ ನಿರ್ಮಾಣ ಮಾತ್ರವಲ್ಲ, ರಾಜ್ಯವನ್ನು ಪ್ರಗತಿಯತ್ತ ತೆಗೆದುಕೊಂಡು ಹೋಗುವ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.
ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಬೆಂಗಳೂರಿನಿಂದ ನಡೆಸಿದ ವಿಡಿಯೊ ಸಭೆಯಲ್ಲಿ ಮಾತನಾಡಿದ ಸಚಿವರು ಈ ಎರಡೂ ಯೋಜನೆಗಳಡಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಂಜನಿಯರುಗಳು ಯೋಜನಾ ವರದಿಗಳನ್ನು ಸಿದ್ಧಪಡಿಸಿ ಈ ತಿಂಗಳ 17ರೊಳಗೆ ಮಂಜೂರಾತಿ ಕೋರಿ ಸಲ್ಲಿಸಬೇಕು ಎಂದು ಎಂಜನಿಯರ್‌ಗಳಿಗೆ ಸೂಚನೆ ನೀಡಿದರು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತೆ ರಸ್ತೆಗಳನ್ನು ಸುಸ್ಥಿರ ರೀತಿಯಲ್ಲಿ ನಿರ್ಮಾಣ ಮಾಡಲು ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದರು.
ಪ್ರಗತಿಪಥ ಯೋಜನೆಯಡಿ ರಾಜ್ಯದ 7,110 ಕಿ.ಮೀ ಉದ್ದದ ರಸ್ತೆಗಳನ್ನು 5,190 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು, ಹಾಗೆಯೇ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ 1,150 ಕಿ.ಮೀ ಉದ್ದದ ರಸ್ತೆಗಳನ್ನು 1,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದ ಸಚಿವರು ಶೀಘ್ರ ಪ್ರಕ್ರಿಯೆಗಳನ್ನು ಮುಗಿಸಿ, ಅಕ್ಟೋಬರ್‌ ಎರಡರಂದು ಕಾಮಗಾರಿಗಳಿಗೆ ಚಾಲನೆ ನೀಡಬೇಕೆಂದು ಹೇಳಿದರು.
ಅತಿವೃಷ್ಟಿಯಿಂದ ಹಾಳಾಗಿರುವ ಗ್ರಾಮೀಣ ರಸ್ತೆಗಳನ್ನು ದುರಸ್ತಿ ಮಾಡಲು ಸಾಕಷ್ಟು ಅನುದಾನ ಲಭ್ಯವಿದ್ದಾಗ್ಯೂ ಪ್ರಗತಿ ತೃಪ್ತಿಕರವಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಸಚಿವರು ಶೀಘ್ರದಲ್ಲಿ ಈ ಕಾಮಗಾರಿಗಳನ್ನು ಮುಗಿಸದಿದ್ದಲ್ಲಿ ಎಇಇಗಳನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತ್ತು ಪಡಿಸಲು ಹಾಗೂ ಗುತ್ತಿಗೆದಾರರನ್ನುಕಪ್ಪುಪಟ್ಟಿಗೆ ಸೇರಿಸಲು ಸಿಇಒಗಳಿಗೆ ಸೂಚಿಸಿದರು
ರಸ್ತೆ ನಿರ್ಮಾಣ ಕಾಮಗಾರಿ ನಡೆಯುವಾಗ ಸ್ಥಳ ಸಮೀಕ್ಷೆ ನಡೆಸದ ಎಂಜನಿಯರ್‌ಗಳು ಹಣ ಪಾವತಿ ಮಾಡುವಾಗ ಪರಿಶೀಲನೆ ನಡೆಸುವ ಪದ್ಧತಿ ಬಗ್ಗೆ ಸಚಿವರು ಆಕ್ಷೇಪ ವ್ಯಕ್ತಪಡಿಸಿ, ರಸ್ತೆ ನಿರ್ಮಾಣದ ಕಾಮಗಾರಿಗಳು ನಡೆಯುವಾಗ ಸ್ಥಳದಲ್ಲಿದ್ದು ಗುಣಮಟ್ಟದಿಂದ ಕೂಡಿದ ರಸ್ತೆಗಳು ನಿರ್ಮಾಣವಾಗುವಂತೆ ನಿಗಾ ವಹಿಸಬೇಕೆಂದು ಆದೇಶಿಸಿದರು.
ಘನತ್ಯಾಜ್ಯ ವಿಲೇವಾರಿ ಸಂಬಂಧದಲ್ಲಿ ಗ್ರಾಮೀಣ ಭಾಗಗಳಲ್ಲಿ ಮಹಿಳಾ ಚಾಲಕರನ್ನು ಒಳಗೊಂಡ ವಾಹನಗಳನ್ನು ಸಿದ್ಧಪಡಿಸಲಾಗಿದೆ, ಈ ಚಾಲಕರಿಗೆ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡುವಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವರು ಸಿಇಒಗಳಿಗೆ ತಿಳಿಸಿದರು.
ಸಭೆಯಲ್ಲಿ ಅಭಿವೃದ್ಧಿ ಆಯುಕ್ತ ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರವೇಜ್‌, ಪಂಚಾಯತ್‌ ರಾಜ್‌ ಆಯುಕ್ತೆ ಡಾ.ಅರುಂದತಿ ಚಂದ್ರಶೇಖರ್‌, ನರೇಗ ಆಯುಕ್ತ ಪವನ್‌ ಕುಮಾರ್‌ ಮಾಲಪಾಟಿ, ಗ್ರಾಮೀಣ ನೀರು ಸರಬರಾಜು ನಿರ್ದೇಶಕ ಕೆ.ನಾಗೇಂದ್ರ ಪ್ರಸಾದ್‌, ಇ-ಆಡಳಿತ ನಿರ್ದೇಶಕಿ ಡಾ.ಕೆ.ನಂದಿನಿದೇವಿ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು