ಕಾಗಿನಾ ನದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದ ಯುವಕ:ಧಾರಾಕಾರ ಮಳೆಗೆ ಮನೆಗಳಿಗೆ ನುಗ್ಗಿದ ನೀರು: ಸಂತ್ರಸ್ತರಿಗೆ ಗಂಜಿ ಕೇಂದ್ರ ಪ್ರಾರಂಭಿಸಲು ತೆಲ್ಕೂರ್ ಆಗ್ರಹ
ಕಲಬುರಗಿ:ಸೆ.2: ಧಾರಾಕಾರ ಮಳೆಯಿಂದಾಗಿ ತಾಲ್ಲೂಕಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಕುಟುಂಬದ ಸದಸ್ಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಕೂಡಲೇ ಗಂಜಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಒತ್ತಾಯಿಸಿದರು.
ಸೇಡಂ ಪಟ್ಟಣದ ಕಲಬುರ್ಗಿ ಕ್ರಾಸ್ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳಿಂದ ಸತತ ಮಳೆಗೆ ಕಾಗಿಣಾ ನದಿ, ಕೆರೆ ಹಾಗೂ ಸೇತುವೆ ತುಂಬಿ ಹರಿಯುತ್ತಿದ್ದು. ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ದಿನಸಿ ಪದಾರ್ಥಗಳು ಹಾಳಾಗಿವೆ. ಇದ್ದೆಕೆಲ್ಲ ಜಿಲ್ಲಾಡಳಿತ ಮತ್ತು ತಾಲ್ಲೂಕಾಡಳಿತ ಸಂಪೂರ್ಣ ನಿರ್ಲಕ್ಷ್ಯತೆ ವಹಿಸಿದೆ ಎಂದು ದೂರಿದರು.
ಹವಾಮಾನ ಇಲಾಖೆಯಿಂದ ಭಾರಿ ಮಳೆ ಬರುವ ಮುನ್ನೆಚರಿಕ್ಕೆ ವಹಿಸಲು ಹೇಳಿದರೂ ಸಹ ಜಿಲ್ಲಾಡಳಿತ ಮತ್ತು ತಾಲ್ಲೂಕಾಡಳಿತ ನಿರ್ಲಕ್ಷ್ಯಕ್ಕೆ ಸತತ ಮಳೆಗೆ ಪಟ್ಟಣದ ಹಲವು ಬಡವಾಣಿಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಅಕ್ಕಿ. ಜೋಳ. ಬೆಳೆ. ತರಕಾರಿ ಹಾಗೂ ದಿನಸಿ ಪದಾರ್ಥಗಳು ನೀರಿನಲ್ಲಿ ತೇಲಾಡಿದ್ದು, ಇಡೀ ರಾತ್ರಿ ಜಾಗರಣೆ ನಡೆಸಿ ಮಳೆ ನೀರು ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ಅಂತಹಾ ಮನೆಗಳಿಗೆ ತಾಲ್ಲೂಕಾಡಳಿತದ ಅಧಿಕಾರಿಗಳು ಭೇಟಿ ನೀಡಿ ಸರ್ಕಾರದಿಂದ 25 ಸಾವಿರ ರೂ.ಗಳ ಸಹಾಯ ದಾನ ನೀಡಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಕುರಕುಂಟಾ ಗ್ರಾಮದ ಯುವಕ ರಾಜು ನಾಮವಾರ್ (40) ಅವರು ಸತತವಾಗಿ ಸುರಿದ ಬಾರಿ ಮಳೆಗೆ ಕಾಗಿಣಾ ನದಿ ತುಂಬಿ ಹರಿಯುತ್ತಿದ್ದ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಇನ್ನೂವರೆಗೆ ಪತ್ತೆ ಹಚ್ಚಲು ಆಗುತ್ತಿಲ್ಲ. ಕೂಡಲೇ ಪತ್ತೆ ಹಚ್ಚಬೇಕೇಂದು ಆಗ್ರಹಿಸಿದ ಅವರು, ಹಲವೆಡೆ ಗ್ರಾಮಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಮನೆಯಲ್ಲಿರುವ ದಿನಸಿ ಪದಾರ್ಥಗಳು ಹಾಳಾಗಿವೆ ಹಾಗೂ ಸೇತುವೆ ತುಂಬಿ ರಸ್ತೆ ಸಂಪರ್ಕ ಕಡಿತಗೊಂಡಿರುವ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಗಂಜಿ ಕೇಂದ್ರ ಪ್ರಾರಂಭಿಸಿ ಊಟದ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತರು ಹೊಲದಲ್ಲಿ ಹೆಸರು. ಉದ್ದು. ತೋಗರಿ ಬೆಳೆಗಳು ಮಳೆ ನೀರಿನಿಂದ ಸಂಪೂರ್ಣ ಹಾಳಾಗಿದ್ದ ಹೊಲಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ತೆರಳಿ ರೈತರಲ್ಲಿ ತಾರತಮ್ಯ ಅನುಸರಿಸದೇ ಸರ್ವೆ ಮಾಡಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಚುನಾವಣಿಯಲ್ಲಿ ಗೆದ್ದು ಇಲ್ಲಿಯವರೆಗೆ ಮತಕ್ಷೇತ್ರದ ಜನರಿಗೆ ಭೇಟಿ ನೀಡಿ ಸಮಸ್ಯೆಗಳು ಆಲಿಸಲು ಬಂದಿಲ್ಲ ಎಂದು ಖಾರವಾಗಿ ಹೇಳಿದ ಅವರು, ಈಗಲಾದರೂ ಕ್ಷೇತ್ರದ ಜನರು ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಭಾರತಿಯ ಜನತಾ ಪಕ್ಷದ ತಾಲ್ಲೂಕು ಅಧ್ಯಕ್ಷ ಶರಣು ಶಂಕರ್ ಮೆಡಿಕಲ್, ತಾಲ್ಲೂಕು ಕಾರ್ಯದರ್ಶಿಗಳಾದ ತಿರುಪತಿ ಶಹಾಬಾದಕರ್, ವೀರೇಶ್ ಹೂಗಾರ್, ಓಂ ಪ್ರಕಾಶ್ ಪಾಟೀಲ್ ತರನಳ್ಳಿ, ಶಿವಾನಂದ್ ಸ್ವಾಮಿ, ರಾಘವೇಂದ್ರ ಮೆಕಾನಿಕ್ ಮುಂತಾದವರು ಉಪಸ್ಥಿತರಿದ್ದರು.