ಮಾನವನ ದೇಹಕ್ಕೆ ಎಳನೀರು ಸಂಜೀವಿನಿಯಿದ್ದಂತೆ
ಕಲಬುರಗಿ:ಸೆ.2: ಮಾನವನ ದೇಹದ ಬೆಳವಣಿಗೆಗೆ ಗಾಳಿ, ನೀರು, ಆಹಾರ ಅತ್ಯಾವಶ್ಯಕವಾಗಿದೆ. ದೇಹಕ್ಕೆ ಬರುವ ರೋಗಗಳಲ್ಲಿ ಆಹಾರ ಸಂಬಂಧಿತ ಕಾಯಿಲೆಗಳು ಪ್ರಮುಖ. ವ್ಯಕ್ತಿ ಯಾವುದೇ ಕಾಯಿಲೆಗಳಿಗೆ ತುತ್ತಾಗಿ ಆಹಾರ, ನೀರು ಸೇವನೆ ಅಸಾಧ್ಯವಾದಾಗ ಎಳೆನೀರು ಸೇವಿಸಿದರೆ ನೈಸರ್ಗಿಕ ಗ್ಲೂಕೋಸ್ ದೊರೆಯುತ್ತದೆ. ಇದು ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಜೆ.ಆರ್ ನಗರದ ‘ಕೊಹಿನೂರ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ರಾಷ್ಟ್ರೀಯ ತೆಂಗು ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ತೆಂಗು ಬೆಳೆಗಾರರಿಗೆ ಪ್ರೋತ್ಸಾಹ ದೊರೆಯಬೇಕು. ಸೂಕ್ತ ಬೆಲೆ ದೊರೆತರೆ ಬೆಳೆಗಾರರಿಗೆ ಅನಕೂಲವಾಗುತ್ತದೆ. ತೆಂಗಿನ ಬಹುವಿಧ ಪ್ರಯೋಜನೆಗಳು ಹೊಂದಿದೆ. ಆರೋಗ್ಯ, ಧಾರ್ಮಿಕ ಮತ್ತು ಅಡುಗೆಯಲ್ಲಿ ಬಳಕೆಯಾಗುತ್ತದೆ. ಇದನ್ನು ‘ಕಲ್ಪವೃಕ್ಷ’ ಎಂದು ಕರೆಯುವ ಮೂಲಕ ಎಲ್ಲಾ ಕಾಲಕ್ಕೂ, ಎಲ್ಲರಿಗೂ ಬೇಕಾದಂತಹ ಉಪ ಆಹಾರ, ಪಾನೀಯ, ಪೂಜಾ ಸಾಮಾನಾಗಿದೆ ಎಂದರು.
ವಿಶೇಷವಾಗಿ ಎಳೆನೀರಿನಲ್ಲಿರುವ ಪೌಷ್ಠಿಕಾಂಶಗಳು, ಕಿಣ್ವಗಳು, ಫೋಲಿಕ್ ಆಮ್ಲ, ಕ್ಯಾಟಲೇಸ್, ಡಿಹೈಡ್ರೋಜಿನೆಸ್, ಪೆರಾಕ್ಸಿಡೇಸ್ ಮುಂತಾದ ಕಿಣ್ವಗಳು ನಾವು ಸೇವಿಸುವ ಬಗೆ-ಬಗೆಯ ಆಹಾರ ಜೀರ್ಣವಾಗಲು ಇದು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ, ವಿಟಾಮಿನ್ಸ್, ಖನಿಜಾಂಶ ಇರುವದರಿಂದ ಅದರ ಸೇವನೆಯಿಂದ ಕೀಲು-ಮೂಳೆ ನೋವು ಬರೆದಂತೆ ತಡೆಯುತ್ತದೆ. ‘ಬಿ-ಕಾಂಪ್ಲೆಕ್ಸ್’ ವಿಟಾಮಿನ್‍ಗಳು ಇವೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಗೆ ಸಿದ್ಧೌಷಧವಾಗಿದೆ. ತೂಕ ಕಡಿಮೆ ಮಾಡಿಕೊಳ್ಳಲು, ಜಂತು ಹುಳುವಿನ ಸಮಸ್ಯೆ ನಿವಾರಣೆಗೆ, ಚರ್ಮ ಬೇಗ ಸುಕ್ಕಾಗದಂತೆ ತಡೆಯುತ್ತದೆ. ಕ್ಯಾನ್ಸರ್ ರೋಗವು ಕೂಡ ಬರದಂತೆ ತಡೆಯಬಹುದು ಎಂಬುದನ್ನು ವೈಜ್ಞಾನಿಕವಾಗಿ ನಿರೂಪಿಸಲಾಗಿದೆ ಎಂದು ಎಳೆನೀರಿನ ಸೇವನೆಯ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಪರಮೇಶ್ವರ ಬಿ.ದೇಸಾಯಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಅಕಾಡೆಮಿಯ ನಿರ್ದೇಶಕ ದತ್ತು ಹಡಪದ ಹಾಗೂ ಸಂಸ್ಥೆಯ ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.