ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ ಕುಡಿಯಲು ಮನವಿ
ಕಲಬುರಗಿ:ಸೆ.2:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಜಲಮೂಲ ನದಿಗಳಾದ ಭೀಮಾ ಹಾಗೂ ಬೆಣೇತ್ತೋರ ನದಿಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಕಲುಷಿತ ನೀರು ಬರುತ್ತಿದೆ. ಈ ಕುಡಿಯುವ ನೀರನ್ನು ಶುದ್ಧೀಕರಿಸಿ, ಸೂಪರ್ ಕ್ಲೋರಿನೇಶನ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ. ಆದಾಗ್ಯೂ ಕಲಬುರಗಿ ನಗರದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರನ್ನು ಕಾಯಿಸಿ, ಆರಿಸಿ ಮತ್ತು ಸೊಸಿ ಕುಡಿಯಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಸಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಟಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ನಗರದ ಸಾರ್ವಜನಿಕರು ತಮ್ಮ ಮನೆಗಳಿಗೆ ತೆಗೆದುಕೊಂಡ ನಳದ ಜೋಡಣೆಗೆ ತೊಟ್ಟಿಯನ್ನು ಕಡ್ಡಾಯವಾಗಿ ಕೂಡಿಸಿಕೊಳ್ಳಬೇಕು ಮತ್ತು ನಳದ ತಗ್ಗುಗಳನ್ನು ಮುಚ್ಚಬೇಕು. ಏಕೆಂದರೆ ತಗ್ಗುಗಳಲ್ಲಿ ಕಲುಷಿತ ನೀರು ಸಂಗ್ರಹಣೆಯಾಗಿ ಅದೇ ನೀರು ಮತ್ತೇ ನಳದ ತೊಟ್ಟಿಯಲ್ಲಿ ಸೇರುವ ಮೂಲಕ ಮುಂದಿನ ಗ್ರಾಹಕರಿಗೆ ತಲುಪುತ್ತದೆ. ಇದರಿಂದ ಕೂಡಾ ಸಾಂಕ್ರಾಮಿಕ ರೋಗ ಹರಡುವ ಸಂಭವ ಇರುತ್ತದೆ. ಇದರಿಂದ ನೀರು ಪೋಲಾಗದಂತೆ ನೋಡಿಕೊಳ್ಳಬಹುದಾಗಿದೆ.
ಸಾರ್ವಜನಿಕರು ಕಲಬುರಗಿ ಮಹಾನಗರ ಪಾಲಿಕೆ, ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್ ಆಂಡ್ ಟಿ ಲಿಮಿಟೆಡ್‍ರವರೊಂದಿಗೆ ಸಹಕರಿಸಬೇಕು. ನೀರಿನ ಸಮಸ್ಯೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರ ಸೇವಾ ದೂರವಾಣಿ ಸಂಖ್ಯೆ +91 1800 425 8247 (ಛಿಛಿಛಿ) ಮತ್ತು 084-722-37247 ಗೆ ಸಂಪರ್ಕಿಸಲು ಕೋರಲಾಗಿದೆ.