ಗಾರಂಪಳ್ಳಿ: ಬಿಡುವಿಲ್ಲದೆ ಸುರಿದ ಮಳೆಗೆ ಕುರಿಗಳು ಹೈರಾಣ
ಚಿಂಚೋಳಿ,ಸೆ.2- ಕಳೆದ ಎರಡು ಮೂರು ದಿನಗಳಿಂದ ಬಿಡುವಿಲ್ಲದೇ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಬರೀ ಜನಗಳಿಗಷ್ಟೇ ಅಲ್ಲದೇ ಜಾನುವಾರುಗಳಿಗೂ ಈ ಮಳೆಯಿಂದ ಹೈರಾಣವಾಗಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ತಾಲೂಕಿನ ಗಾರಂಪಳ್ಳಿ ಗ್ರಾಮದಲ್ಲಿ ಕುರಿಗಾಹಿಗಳು ತಮ್ಮ ಕುರಿಗಳನ್ನು ಕಾಪಾಡಿಕೊಂಡು ಮನೆಗೆ ಕರೆದುಕೊಂಡು ಹೋಗಲು ನೀರಿಗಿಳಿದು ಹರಸಾಹಸಪಟ್ಟಿರುವ ವಿಡಿಯೋ ತುಣುಕೊಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೆಲ್ಲಾ ಹರಡಿಕೊಂಡು ಓಡಾಡುತ್ತಿದೆ.
ಹೌದು, ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಗಾರಂಪಳ್ಳಿ ಗ್ರಾಮದ ಸಂಪರ್ಕ ಸೇತುವೆಯು ಜಲಾವೃತಗೊಂಡು ಸೇತುವೆಯ ಮೇಲೆಲ್ಲ ನೀರು ಹರಿಯುತ್ತಿದೆ. ನಿನ್ನೆ ಭಾನುವಾರ ಬೆಳಿಗ್ಗೆ ಯಥಾಪ್ರಕಾರ ಕುರಿಗಾಹಿಗಳು ತಮ್ಮ ಕುರಿಗಳನ್ನು ಹೊಡೆದುಕೊಂಡು ಅವುಗಳನ್ನು ಮೇಯಿಸಲು ಊರನ್ನು ದಾಟಿಕೊಂಡು ಅಕ್ಕ ಪಕ್ಕದ ಬಯಲು ಪ್ರದೇಶಗಳಿಗೆ ಹೋಗಿದ್ದು ನಂತರದಲ್ಲಿ ಸುರಿದ ಮಳೆಗೆ ಗ್ರಾಮದ ಹಳ್ಳವು ತುಂಬಿ ಹರಿದಿದ್ದು ಸೇತುವೆ ಜಲಾವೃತಗೊಂಡ ಕಾರಣ ಕುರಿಗಾಹಿಗಳು ಸಂಜೆ ತಮ್ಮ ತಮ್ಮ ಕುರಿಗಳನ್ನು ಹೊಡೆದುಕೊಂಡು ಮನೆಗೆ ವಾಪಸ್ಸಾಗುವ ಸಂದರ್ಭದಲ್ಲಿ ಜಲಾವೃತಗೊಂಡ ಸೇತುವೆಯ ಮೇಲಿನ ರಸ್ತೆಯ ಮೇಲೆ ನಡೆಯುವದಕ್ಕಾಗದೆ ಭಯ ಪಟ್ಟುಕೊಂಡು ಗಾಬರಿಯಿಂದ ವರ್ತಿಸಿವೆ.
ಕುರಿಗಳ ಜೊತೆಗೆ ಕುರಿಗಾಹಿಗಳ ಹಿಂದೆ ಹೋಗಿದ್ದ ನಾಯಿಗಳು ಕೂಡ ಕಕ್ಕಾಬಿಕ್ಕಿಯಾಗಿದ್ದ ಈ ವರ್ತನೆಯನ್ನು ಕಂಡು ಕುರಿಗಳನ್ನು ಹೇಗಾದರೂ ಮಾಡಿ ಕಾಪಾಡಿಕೊಂಡು ಮನೆಯ ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಲೇ ಬೇಕು ಇಲ್ಲವಾದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಜೀವ ಕಳೆದುಕೊಳ್ಳುತ್ತವೆ ಎಂದು ಅರಿತುಕೊಂಡು ಬೇರೆ ದಾರಿ ಕಾಣದ ಕುರಿಗಾಹಿಗಳು ತಮ್ಮ ತಮ್ಮ ಮನೆಯವರಿಗೆ ಆತ್ಮೀಯ ಗ್ರಾಮಸ್ಥರಿಗೆ ಕರೆ ಮಾಡಿ ತಿಳಿಸಿದಾಗ ಕೆಲವು ಗ್ರಾಮಸ್ಥರು ಹಾಗೂ ಗ್ರಾಮದ ವಿಪತ್ತಿನ ಸಮಯಕ್ಕೆ ಸ್ವಯಂ ಪ್ರೇರಿತರಾಗಿ ಕಾರ್ಯ ನಿರ್ವಹಿಸುವ ಶೌರ್ಯ ತಂಡ ಮೌನೇಶ ಮುಸ್ತರಿ ಹಾಗೂ ಗೋಪಾಲ ಗಾರಂಪಳ್ಳಿ ನೇತೃತ್ವದಲ್ಲಿ ಸೇತುವೆಯ ಸ್ಥಳಕ್ಕೆ ಬಂದ ತಂಡ ಎಲ್ಲರೂ ಸೇರಿಕೊಂಡು ಸುಮಾರು 150 ರಷ್ಟು ಕುರಿಗಳನ್ನು ಯಶಸ್ವಿಯಾಗಿ ಸೇತುವೆಯನ್ನು ದಾಟಿಸಿ ಸುರಕ್ಷಿತವಾಗಿ ಗ್ರಾಮದ ಒಳಗಡೆ ಬಂದು ಮನೆಯಲ್ಲಿನ ದಿನನಿತ್ಯದ ಸಂರಕ್ಷಿತ ಸ್ಥಳಕ್ಕೆ ಬಂದು ಸೇರುವಂತಹ ಕೆಲಸ ನಡೆದಿದೆ.
ಮೂಕ ಪ್ರಾಣಿಗಳು ಸೇತುವೆಯನ್ನು ದಾಟದೇ ನೀರಿನಲ್ಲಿ ಕೊಚ್ಚಿಕೊಂಡು ಹೋಗುವಂತಿದ್ದ ಪರಿಸ್ಥಿತಿಯಲ್ಲಿ ಅವುಗಳ ಜೀವವನ್ನು ಉಳಿಸಿದ ಇವರ ಕಾರ್ಯಕ್ಕೆ ಗ್ರಾಮದ ಜನರಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಜನ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರೆ ಇತ್ತ ಕಡೆ ಕುರಿಗಾಹಿಗಳು ನಮ್ಮ ಕುರಿಗಳ ಜೊತೆಗೆ ಅವುಗಳು ಕೊಚ್ಚಿಕೊಂಡು ಹೋಗಿದ್ದರೆ ತಮಗಾಗುತ್ತಿದ್ದ ನಷ್ಟವನ್ನು ಸಹ ನೆನೆದುಕೊಂಡು ಅಂತಹ ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬಂದದ್ದನ್ನು ಸ್ಮರಿಸಿ ಧನ ಮತ್ತು ಮೂಕ ಪ್ರಾಣಿಗಳ ಪ್ರಾಣ ಎರಡೂ ಕಾಪಾಡುವಲ್ಲಿ ಯಶಸ್ವಿಯಾಗಿದ್ದಕ್ಕೆ ಅಭಿನಂದಿಸುವಂತಾಗಿದೆ.