ಸಗರನಾಡು ಸಾಹಿತ್ಯ ಕಲೆಯ ಸಂಗಮವಾಗಿದೆ:ಸಿದ್ದಪ್ಪ ಹೊಟ್ಟಿ
ಕೆಂಭಾವಿ :ಸೆ.2: ಸಗರ ನಾಡಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಮಹನೀಯರಿದ್ದು ಇಲ್ಲಿ ಕನ್ನಡ ಸಾಹಿತ್ಯದ ಭಂಡಾರವೆ ಅಡಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಕೆಂಭಾವಿ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಗರ ನಾಡು ಕಲೆ, ಸಂಗೀತ, ಸಾಹಿತ್ಯ, ಇತಿಹಾಸ, ಸಂಶೋಧನೆಗೆ ರಾಜ್ಯದ ಗಮನ ಸೆಳೆದಿದ್ದು ಇಲ್ಲಿರುವ ಇನ್ನೂ ಅನೇಕ ಸಾಹಿತಿ ಕವಿಗಳನ್ನು ಮೇಲೆಕ್ಕೆತ್ತುವ ಕೆಲಸ ಸರ್ಕಾರ ಮಾಡಬೇಕಿದೆ ಎಂದು ಹೇಳಿದರು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವಲಯ ಸಾಹಿತ್ಯ ಪರಿಷತ್ ಘಟಕದ ಪದಾಧಿಕಾರಿಗಳ ಆಯ್ಕೆಗೆ ಇದೀಗ ಕಾಲ ಕೂಡಿ ಬಂದಿದ್ದು ಇದಕ್ಕೆ ಇಲ್ಲಿರುವ ಹಿರಿಯ ಸಾಹಿತಿಗಳ ವಿಶೇಷ ಆಸಕ್ತಿಯೆ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಈ ವಲಯ ಘಟಕ ಕನ್ನಡ ಸಾಹಿತ್ಯ, ಭಾಷೆ ಬೆಳೆಸುವಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರೆಸಲಿ ಎಂದು ಹಾರೈಸಿದರು. ನಂತರ ನೂತನ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ ಅವರಿಗೆ ಕನ್ನಡ ಧ್ವಜ ನೀಡುವ ಮೂಲಕ ನಿಕಟಪೂರ್ವ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕ ಮಾತನಾಡಿದರು. ನಂತರ ಪಟ್ಟಣದ ಐದು ಜನ ಹಿರಿಯ ಸಾಹಿತಿಗಳನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಹಿರಿಯರ ಮಾರ್ಗದರ್ಶನ, ಸಾಹಿತ್ಯಾಸಕ್ತರ ಸಹಕಾರದಿಂದ ನನಗೆ ಕಸಾಪ ಅಧ್ಯಕ್ಷರಾಗುವ ಭಾಗ್ಯ ದೊರೆತಿದೆ. ಈ ಬಾರಿ ತಾಲೂಕಾ ಸಮ್ಮೇಳನವನ್ನು ಕೆಂಭಾವಿ ಪಟ್ಟಣದಲ್ಲಿ ಮಾಡುವ ಕುರಿತು ಆಸಕ್ತಿ ಹೊಂದಿದ್ದು ತಾಲೂಕಾ ಘಟಕದ ಸಹಕಾರ ದೊರೆತರೆ ಸಮ್ಮೇಳನ ಮಾಡಲಾಗುವುದು.
ಮಡಿವಾಳಪ್ಪಗೌಡ ಪಾಟೀಲ. ಕಸಾಪ ನೂತನ ವಲಯಾಧ್ಯಕ್ಷ.