ರಸಪ್ರಶ್ನೆ ಸ್ಪರ್ಧೆಯಲ್ಲಿಲಿಖಿತ್ ಸ್ವರೂಪ್‌ಗೆ ರಾಜ್ಯದ ಮೊದಲ ಪ್ರಶಸ್ತಿ
ಕೋಲಾರ,ಸೆ,೨-ಕರ್ನಾಟಕ ಜ್ಞಾನ ಜ್ಞಾನ ಸಮಿತಿಯು ೨೦೨೪-೨೫ನೇ ಸಾಲಿನಲ್ಲಿ ನಡೆಸಿದ ಸ್ವಾತಂತ್ರ್ಯ ಚಳುವಳಿ ಕುರಿತ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದ ಕೋಲಾರದ ಲಿಖಿತ್ ಸ್ವರೂಪ್ ಗೆ ರಾಜ್ಯದ ಮೊದಲ ಪ್ರಶಸ್ತಿ ಲಭಿಸಿದೆ.
ಬೆಂಗಳೂರು ಮಾಂಟೇಸರಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿ ಲಿಖಿತ್ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮರ ಜ್ಯೋತಿ ಪಬ್ಲಿಕ್ ಶಾಲೆಯ ಹೆಚ್ ಎನ್ ನಯನ ಇದೇ ಸ್ಪರ್ಧೆಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ರಸಪ್ರಶ್ನೆಯಲ್ಲಿ ಕೋಲಾರ ಜಿಲ್ಲೆ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಗೊಳಿಸಿದ್ದಾರೆ .
ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜನಹಳ್ಳಿ ಶಾಲೆಯ ಕೆ.ಎನ್.ಭಾನು ಪ್ರಸಾದ್ ಜಿಲ್ಲೆಗೆ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮುಳಬಾಗಿಲಿನ ವೈಷ್ಣವಿ ಶಾಲೆಯ ಬಿ.ಆರ್.ಮೋಹಿತ ದ್ವಿತೀಯ ಸ್ಥಾನವನ್ನು, ಕೆ ಜಿ ಎಫ್ ನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸ್ವಾತಿ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.
ಮುಳಬಾಗಿಲಿನ ಬ್ರಿಲಿಯಂಟ್ ಪಬ್ಲಿಕ್ ಶಾಲೆಯ ರಿಹಾನ್ ನಾಲ್ಕನೇ ಸ್ಥಾನವನ್ನು, ಮಾಲೂರಿನ ಕೆ.ಎಲ್.ಇ ಆಂಗ್ಲ ಮಾಧ್ಯಮಿಕ ಶಾಲೆಯ ಪೂಜಾ ಕುಮಾರಿ ಐದನೇ ಸ್ಥಾನವನ್ನು, ಬಂಗಾರಪೇಟೆಯ ಆದರ್ಶ ವಿದ್ಯಾಲಯದ ಅಮ್ಮತುಲ್ ಜವೇರಿಯಾ ಆರನೇ ಸ್ಥಾನವನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ಪರ್ಧಿಸಿದ್ದ ವಿದ್ಯಾರ್ಥಿಗಳಲ್ಲಿ ಕೋಲಾರ ಹೆಚ್ಚು ಪ್ರಶಸ್ತಿಯನ್ನು ಮತ್ತು ಮೊದಲ ಪ್ರಶಸ್ತಿ ಗರಿಯನ್ನು ತಮ್ಮದಾಗಿಸಿಕೊಂಡಿರುವುದು ಸಂತಸಸದ ವಿಷಯವಾಗಿದ್ದು, ಇವರುಗಳಿಗೆ ರಾಜ್ಯಮಟ್ಟ, ಜಿಲ್ಲಾಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವಿಸಲಾಗುವುದು ಎಂದು ಜಿಲ್ಲಾ ಮಾರ್ಗದರ್ಶಿ ಕೆ.ವಿ.ಜಿಗನ್ನಾಥ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.