ಹಿಂದೂ ಧರ್ಮದ ವಿಚಾರಧಾರೆ ಎಲ್ಲರಿಗೂ ತಲುಪಲಿ
ತುಮಕೂರು, ಅ. ೩- ಹಿಂದೂ ಧರ್ಮ ಎಲ್ಲರಿಗೂ ಸೇರಿದ ಧರ್ಮ. ಯಾರೋ ನಾಲ್ಕು ಜನರಿಗೆ ಸೇರಿದ್ದಲ್ಲ. ಈ ಧರ್ಮದ ವಿಚಾರಧಾರೆ ಪ್ರತಿಯೊಬ್ಬ ಭಾರತೀಯನಿಗೂ ತಲುಪಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಜೂನಿಯರ್ ಮೈದಾನದಲ್ಲಿ ಇದೇ ಪ್ರಥಮ ಬಾರಿಗೆ ಸರ್ಕಾರ ಹಾಗೂ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿರುವ ತುಮಕೂರು ದಸರಾ ಉತ್ಸವ-೨೦೨೪ ಸಮಾರಂಭವನ್ನು ವಾದ್ಯ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಅನೇಕ ವಿಚಾರಧಾರೆಗಳಿವೆ. ನಮ್ಮ ಪುರಾಣ, ವೇದಗಳಲ್ಲಿ ಒಳ್ಳೆಯದನ್ನೆ ಬರೆದಿಟ್ಟಿದ್ದಾರೆ ಹಾಗಾಗಿ ಹಿಂದೂ ಧರ್ಮ ಎಲ್ಲರಿಗೂ ಸೇರಿದ ಧರ್ಮ ಎಂದರು.
ಹಿಂದೂ ಧರ್ಮದ ಆಧಾರದ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಬರೆದಿಟ್ಟಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿಯಲ್ಲಿ ದುಷ್ಟ ಶಕ್ತಿ ಇರಬಾರದು, ದುಷ್ಟಶಕ್ತಿಗಳು ಸಂಹಾರ ಆಗಬೇಕು ಎಂಬುದು ಮುಖ್ಯ ಸಂದೇಶವಾಗಿದೆ. ತಾಯಿ ಚಾಮುಂಡೇಶ್ವರಿ ದುಷ್ಟಶಕ್ತಿಗಳನ್ನು ಸಂಹಾರ ಮಾಡಿದ್ದಾಳೆ. ನಿನ್ನೊಳಗಿರುವ ದುಷ್ಟಶಕ್ತಿಯನ್ನು ಸಂಹಾರ ಮಾಡಿಕೊಳ್ಳಬೇಕು ಎಂಬುದು ಈ ದಸರಾ ಉತ್ಸವ ಆಚರಣೆಯ ಪ್ರಮುಖ ಸಂದೇಶವಾಗಿದೆ ಎಂದರು.
ಸಮಾಜದಲ್ಲಿ ಇರುವ ದುಷ್ಟಶಕ್ತಿಗಳು ಸಂಹಾರ ಆಗಬೇಕು ಎನ್ನುವುದು ಈ ನವರಾತ್ರಿ ಉತ್ಸವ ಆಚರಣೆಯ ಸಂಕೇತವಾಗಿದೆ ಎಂದು ಅವರು ಹೇಳಿದರು.
ಇತಿಹಾಸದ ಪುಟಗಳಲ್ಲಿ ತುಮಕೂರು ದಸರಾ
ತುಮಕೂರಿನಲ್ಲಿ ಹೊಸ ಚರಿತ್ರೆ ಆರಂಭವಾಗಿದೆ. ಯಾರಿಗೆ ಇಷ್ಟ ಇದೆಯೋ, ಇಲ್ಲವೋ ಅದನ್ನೆಲ್ಲಾ ಪಕ್ಕಕ್ಕಿಟ್ಟು ತುಮಕೂರು ದಸರಾ ಆಚರಣೆ ಮಾಡಲಾಗುತ್ತಿದೆ. ಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ಆಚರಿಸಲಾಗುತ್ತಿರುವ ತುಮಕೂರು ದಸರಾ-೨೦೨೪ ಇತಿಹಾಸದಲ್ಲಿ ಉಳಿಯಲಿದೆ ಎಂದರು.
ಈಗಾಗಲೇ ಮೈಸೂರು ದಸರಾ ಪ್ರಾರಂಭೋತ್ಸವವನ್ನು ಇತಿಹಾಸದ ಪುಸ್ತಕದಲ್ಲಿ ಓದುತ್ತೇವೆ. ಹಾಗೆಯೇ ಮುಂದೊಂದು ದಿನ ತುಮಕೂರು ದಸರಾ-೨೦೨೪ ಪ್ರಾರಂಭೋತ್ಸವವನ್ನು ಯಾರಾದರೂ ಇತಿಹಾಸದ ಪುಟಗಳಲ್ಲಿ ಬರೆದಿಡುತ್ತಾರೆ ಎಂದರು.
ದಸರಾ ಉತ್ಸವ ತುಮಕೂರು, ಮೈಸೂರಿನಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ೯ ದಿನಗಳ ಕಾಲ ನವರಾತ್ರಿ ಉತ್ಸವ ಆಚರಣೆ ಮಾಡಲಾಗುತ್ತಿದೆ. ೯ ದಿನ ಮೈಸೂರು ಅರಮನೆಯಲ್ಲಿ ಮಾಡುವ ಪೂಜೆ, ಚಾಮುಂಡೇಶ್ವರಿ ದೇವಾಲಯದಲ್ಲಿ ನೆರವೇರುವ ಪೂಜೆ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ತಿಳಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಜನರ ಆಕರ್ಷಣೆ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ ಎಂದು ಅವರು ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಎಲೆರಾಂಪುರದ ಶ್ರೀ ಹನುಮಂತನಾಥ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಶಾಸಕ ಟಿ.ಬಿ. ಜಯಚಂದ್ರ ವಹಿಸಿದ್ದರು.
ಈ ಸಂದರ್ಭದಲ್ಲಿ ನವದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕ ಕೆ. ಷಡಕ್ಷರಿ, ಕನ್ನಿಕಾ ಪರಮೇಶ್ವರ್, ಮಾಜಿ ಶಾಸಕ ಡಾ. ರಫೀಕ್‌ಅಹಮದ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಓ ಜಿ. ಪ್ರಭು, ಎಸ್ಪಿ ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಅಪರ ಜಿಲ್ಲಾಧಿಕಾರಿ ಡಾ. ತಿಪ್ಪೇಸ್ವಾಮಿ ಸೇರಿದಂತೆ ಪಾಲಿಕೆ ಮಾಜಿ ಸದಸ್ಯರುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.