ಚಿಪ್ಪು ಹಂದಿ ಬೇಟೆ ಗ್ಯಾಂಗ್ ಪತ್ತೆ
ಬೆಳಗಾವಿ,ಅ.೩- ಅಕ್ರಮವಾಗಿ ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಖಾನಾಪುರ ಅರಣ್ಯದಲ್ಲಿ ಬೇಟೆಯಾಡಿ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ನ ಇಬ್ಬರನ್ನು ಬಂಧಿಸಿ ಜೀವಂತ ಒಂದು ಚಿಪ್ಪು ಹಂದಿ ವಶಪಡಿಸಿಕೊಂಡಿದ್ದಾರೆ.
ನಾಲ್ಕು ಜನ ಆರೋಪಿಗಳು ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವಾಗ ಕಂಡು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರು ವರ್ಷದ ನಾಲ್ಕೂವರೆ ಕೆಜಿ ತೂಕದ ಜೀವಂತ ಚಿಪ್ಪು ಹಂದಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಖಾನಾಪುರ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಮಾತನಾಡಿ, ಚಿಪ್ಪು ಹಂದಿಯನ್ನು ಪುರುಷತ್ವ ಹೆಚ್ಚಿಸುವ ಔಷಧ ತಯಾರಿಕೆಗಾಗಿ ಬಳಸಲಾಗುತ್ತದೆ. ಇದಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಲು ಬೇಡಿಕೆ ಇದೆ. ಖಾನಾಪುರದಿಂದ ಚೀನಾವರೆಗೂ ಚಿಪ್ಪು ಹಂದಿಯನ್ನು ಸಾಗಾಟ ಮಾಡುತ್ತಿದ್ದು, ಸಾಗಾಟ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದರು.
ಖಾನಾಪುರದಿಂದ ಕಾರವಾರಕ್ಕೆ ಕಳಿಸಿ ಅಲ್ಲಿಂದ ಬೋಟ್ ಮೂಲಕ ಕೋಲ್ಕತ್ತಾಗೆ ಸಾಗಿಸುತ್ತಾರೆ. ಬಳಿಕ ಹಡಗಿನಲ್ಲಿ ಚೀನಾಕ್ಕೆ ಸಾಗಾಟ ಮಾಡುತ್ತಿದ್ದರು. ಸದ್ಯ ಚಿಪ್ಪು ಹಂದಿ ಸಾಗಾಟ ತಂಡದ ಶೋಧಕ್ಕಾಗಿ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ. ಒಂದು ಪ್ರತ್ಯೇಕ ತಂಡ ರಚಸಿ ಕಳ್ಳಸಾಕಾಣೆ ತಂಡದ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿಸಿದ್ದಾರೆ.