ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೆಸರು ಗದ್ದೆಗಳಾಗಿರುವುದು: ಉತ್ತಮ ರಸ್ತೆಗಾಗಿ ಭತ್ತದ ಸಸಿ ನೆಟ್ಟ ವಿದ್ಯಾರ್ಥಿಗಳು
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಸೆ.02: ಬೂದುಗುಪ್ಪ ಗ್ರಾಮದ ಈ ಸರ್ಕಾರಿ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಒಟ್ಟು 236 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದು, ಮಳೆಗಾಲದ ನಾಲ್ಕು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಕೆಸರಿನ ರಸ್ತೆಗಳೆ ಅನಿವಾರ್ಯವಾಗಿದೆ. ಅಲ್ಲದೆ ಈ ರಸ್ತೆಗಳಲ್ಲಿ ಸಮರ್ಪಕವಾದ ಚರಂಡಿಯ ನಿರ್ಮಾಣವಾಗದೇ ಇರುವುದರಿಂದ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಇದರಿಂದಾಗಿ ಪೋಸ್ಟ್ ಆಫೀಸ್ ರಸ್ತೆಯ ಮೇಲೆ  ವರ್ಷದ 12 ತಿಂಗಳು ನೀರು ಹರಿಯುತ್ತದೆ. ಆದರೂ ಗ್ರಾಮದ ಬಲಭಾಗದ ಬಹುತೇಕ ವಿದ್ಯಾರ್ಥಿಗಳು ಪೋಸ್ಟ್ ಆಫೀಸ್ ರಸ್ತೆಯಲ್ಲಿಯೇ ಬರುವುದು ಸಾಮಾನ್ಯವಾಗಿದೆ.
ತಾಲೂಕಿನ ಬೂದುಗುಪ್ಪ ಗ್ರಾಮದಲ್ಲಿರುವ ವಿದ್ಯಾರ್ಥಿಗಳು ಕೆಸರಿನಲ್ಲಿಯೇ ನಡೆದುಕೊಂಡು ಶಾಲೆಗೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಮಳೆ ಬಂದರೆ ಸಾಕು ಶಾಲೆಗೆ ಹೋಗುವ ಮತ್ತು ಪೋಸ್ಟ್ ಆಫೀಸ್ ರಸ್ತೆ ಮತ್ತು ಮುಖ್ಯರಸ್ತೆಯಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕೆಸರು ಗದ್ದೆಯಾಗಿರುತ್ತದೆ. ಇಂತಹ ರಸ್ತೆಗಳಲ್ಲಿಯೇ ವಿದ್ಯಾರ್ಥಿಗಳು ಶಾಲೆಗೆ ದಿನವಿಡೀ ಹೋಗುತ್ತಿದ್ದಾರೆ.
ಮುಖ್ಯರಸ್ತೆಯಿಂದ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಟ್ರ್ಯಾಕ್ಟರ್‌ಗಳ ಕೆ.ಜಿ ವ್ಹೀಲ್‌ಗಳ ಓಡಾಟದಿಂದಾಗಿ ರಸ್ತೆಯ ತುಂಬೆಲ್ಲ ಕೆಸರು ತುಂಬಿಕೊಂಡಿದ್ದು, ಈ ರಸ್ತೆಯಲ್ಲಿಯೂ ವಿದ್ಯಾರ್ಥಿಗಳು ಬರಲು ಸಾಕಷ್ಟು ಅನಾನುಕೂಲವಾಗುತ್ತಿದೆ. ಆದರೂ ಅನಿವಾರ್ಯವಾಗಿ ವಿದ್ಯಾರ್ಥಿಗಳು ಈ ರಸ್ತೆಯಲ್ಲಿಯೂ ಶಾಲೆಗೆ ಬರುತ್ತಾರೆ.
ನಮ್ಮ ಶಾಲೆಗೆ ಮಳೆಗಾಲದಲ್ಲಿ ಕೆಸರಿನಲ್ಲಿಯೇ ನಡೆದುಕೊಂಡು ಬರುತ್ತಿದ್ದೇವೆ, ಸಿ.ಸಿ. ರಸ್ತೆ ನಿರ್ಮಾಣವಾದರೆ ಕೆಸರಿನಲ್ಲಿ ನಾವು ನಡೆದುಕೊಂಡು ಹೋಗುವುದು ತಪ್ಪುತ್ತದೆ ಆದ್ದರಿಂದ ಶೀಘ್ರವಾಗಿ ರಸ್ತೆ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಬೇಕೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಪೋಸ್ಟ್ ಆಫೀಸ್ ರಸ್ತೆಯನ್ನು ಸಿ.ಸಿ.ರಸ್ತೆಯನ್ನಾಗಿ ಪರಿವರ್ತಿಸಲು ನರೇಗಾ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದೆಂದು ಪಿ.ಡಿ.ಒ. ಈರಪ್ಪ ತಿಳಿಸಿದ್ದಾರೆ.
ಶಾಲೆಗೆ ಸಂಫರ್ಕ ಕಲ್ಪಿಸುವ 2 ರಸ್ತೆಗಳು ಮಳೆಗಾಲದಲ್ಲಿ ಕೆಸರುಮಯವಾಗುವುದು ಸಾಮಾನ್ಯವಾಗಿದೆ. ಆದ್ದರಿಂದ ಸಿ.ಸಿ.ರಸ್ತೆ ನಿರ್ಮಿಸಿಕೊಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಗುರು ಶ್ರೀಧರ ತಿಳಿಸಿದ್ದಾರೆ.
ತಮ್ಮ ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಿದ್ಯಾರ್ಥಿಗಳು ಭತ್ತದ ಸಸಿಯನ್ನು ನೆಟ್ಟು, ನಮಗೊಂದು ಉತ್ತಮ ರಸ್ತೆ ಮಾಡಿಕೊಡಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನ ಸೆಳೆದರು.