ಮನಸೂರೆಗೊಂಡ ದಶಾವತಾರ ನೃತ್ಯ ರೂಪಕ
ಬೆಂಗಳೂರು. ಸೆ.೨- ನಗರದ ರಾಜಾಜಿನಗರದ ಶಿವಶಕ್ತಿ ನಾಟ್ಯಾಲಯದ ೨೪ನೇ ವಾರ್ಷಿಕೋತ್ಸವ ಎಡಿಎ ರಂಗಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು.
ಪ್ರಾರಂಭದಲ್ಲಿ ನಾಟ್ಯಾಲಯದ ವಿದ್ಯಾರ್ಥಿನಿಯರು ಸುಮಾರು ಒಂದೂವರೆ ತಾಸು ಕಾಲ ದಶಾವತಾರ ನೃತ್ಯ ರೂಪಕ ಪ್ರದರ್ಶನದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಆಕರ್ಷಕ ವಸ್ತ್ರ ವಿನ್ಯಾಸ ಮತ್ತು ಅಮೋಘ ಅಭಿನಯದೊಂದಿಗೆ ಭರತನಾಟ್ಯದ ಸೊಬಗಿನ ಈ ಸಾಮೂಹಿಕ ನೃತ್ಯ ಕಲಾ ಪ್ರದರ್ಶನ ಸಭಿಕರ ಮನಸೂರೆಗೊಂಡಿತು.
ಶಿವಶಕ್ತಿ ನಾಟ್ಯಾಲಯದ ಸಂಸ್ಥಾಪಕ ನಿರ್ದೇಶಕಿ ವಿದೂಷಿ ಕೆ.ಆರ್. ಗುಣವತಿ ಮಾರ್ಗದರ್ಶನದಲ್ಲಿ ಮೂಡಿಬಂದ ಅಮೋಘ ದೃಶ್ಯ ವೈಭವದ ಈ ನೃತ್ಯ ರೂಪಕ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಾಟ್ಯ ವಿದ್ವಾನ್ ಸುಜೇಂದ್ರ ಬಾಬು, ಮೃದಂಗ ವಿದ್ವಾನ್ ಸಿ. ಚೆಲುವರಾಜು ಹಾಗೂ ಹಿರಿಯ ಪತ್ರಕರ್ತರಾದ ಎಸ್.ಆರ್. ಆರಾಧ್ಯ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು. ವಿದ್ವಾನ್ ಹರೀಶ್ ರಾಮನ್ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ಸಂಸ್ಕ್ರತಿ ಮತ್ತು ಕಲಾ ಪರಂಪರೆಯನ್ನು ಹೊಸ ಪೀಳಿಗೆಯ ಮಕ್ಕಳಲ್ಲಿ ಬಿತ್ತಿ ಬೆಳೆಸಬೇಕಾದ ಅಗತ್ಯವನ್ನು ಅತಿಥಿಗಳೆಲ್ಲರೂ ಒತ್ತಿ ಹೇಳಿದರು. ಪ್ರಜ್ವಲ್ ಪ್ರಾರ್ಥನಾ ಗೀತೆ ಹಾಡಿದರು. ಟಿ.ಎನ್. ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.