ಕೇರಿಗಳಿಂದ ಕೇಳಿದ ಧ್ವನಿಯೇ ದಲಿತ ಸಾಹಿತ್ಯ-ಡಾ.ಚಿನ್ನಸ್ವಾಮಿ ಸೂಸಲೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ2:ಅಸ್ಪೃಶ್ಯತೆಗೆ ಒಳಗಾದವರು, ಮುಟ್ಟಿಸಿಕೊಳ್ಳದ ಕೇರಿ ಸಂಸ್ಕೃತಿಯಲ್ಲಿದ್ದ ನೋವಿನ ಧ್ವನಿಗಳು ಕೆರಳಿ ಸಾಹಿತ್ಯಕ್ಕೆ ಇಳಿದಾಗ ಹಲವರ ಧ್ವನಿಯಾಗಿ ರಾಷ್ಟ್ರಕ್ಕೆ ತಮಟೆಯಾದವು ಎಂದು ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಚಿನ್ನಸ್ವಾಮಿ ಸೂಸಲೆ ಹೇಳಿದರು.
ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆದ ದಲಿತ ಸಾಹಿತ್ಯ ಪರಿಷತ್ತು ನೂತನ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಅಂಬೇಡ್ಕರ್ ಚಿಂತನೆಗಳು ಹೆಚ್ಚು ಪ್ರಚಾರಕ್ಕೆ ಬರುವ ಬದಲು ದೇಗುಲ ಸಂಸ್ಕೃತಿ ವೈಭವೀಕರಣಗೊಳ್ಳುತ್ತಿದೆ.
ಅಂಬೇಡ್ಕರರ ವಿಚಾರಧಾರೆಗಳನ್ನು ತಿರುಚಿ, ಹಲವು ರಾಜಕೀಯ ಪಕ್ಷಗಳು ಶೋಷಿತ ಯುವ ವರ್ಗವನ್ನು ದಾರಿತಪ್ಪಿಸುವ ಮತ್ತು ಅವರಿಗೆ ಹಲವು ದೇವರ ಮಾಲೆಗಳನ್ನು ಕೊಟ್ಟು, ದಿಕ್ಕು ತಪ್ಪಿಸುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದರು. 1999ರಲ್ಲಿ ನಗರದ ಇದೇ ಸ್ಥಳದಲ್ಲಿ ದಲಿತ ಕವಿ ಡಾ.ಸಿದ್ಧಲಿಂಗಯ್ಯನವರು ತಾಲೂಕು ದಲಿತ ಸಾಹಿತ್ಯ ಪರಿಷತ್ತಿಗೆ ಚಾಲನೆ ನೀಡಿದ್ದರು. ಆ ಸಂದರ್ಭದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಹಲವು ಚಳವಳಿಗಳು ಹುಟ್ಟಿಕೊಂಡವು.  ಅವುಗಳ ಪರಿಣಾಮದಿಂದ ವೈಶ್ಯಾವಾಟಿಕೆ, ಬಾಲ್ಯವಿವಾಹ, ಮೀಸಲಾತಿ ತಾರತಮ್ಯ ಹಾಗೂ ಇದೇ ನಗರದ ಕೇರಿ ಜನರಿಂದ ದೂರ ನಿಂತಿದ್ದ ಊರ ಜನ ಸೇರಿದಂತೆ ಹಲವು ಸ್ಥಿತ್ಯಂತರಗಳಾದವು. ಪ್ರಸ್ತುತ ಜಿಲ್ಲಾ ಘಟಕವೀಗ ರಚನೆಗೊಂಡಿದೆ.  ತುಳಿತಕ್ಕೆ ಒಳಗಾದವರು, ಶೋಷಿತರು, ದಮನಿತರ ಧ್ವನಿಯಾಗಿ ದಲಿತ ಸಾಹಿತ್ಯ ಪರಿಷತ್ತು ಪ್ರಚಾರದ ಬದಲು ಜಾಗೃತಿಯನ್ನುಂಟು ಮಾಡುವಂತಾಗಲಿ ಎಂದರು.
ಹಿರಿಯ ಲೇಖಕಿ ಡಾ.ಎಸ್.ಡಿ. ಸುಲೋಚನರು ಬರೆದ ಡಾ.ಜಾಹ್ನವಿ ಎನ್ನುವ ಕಾದಂಬರಿಯನ್ನು ಬಿಡುಗಡೆಗೊಳಿಸಿ ಚೆನ್ನಮ್ಮ ಸಿ ಬಿನ್ನಾಳ ಮಾತನಾಡಿದರು. ದಸಾಪ ರಾಜ್ಯಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಕ್ರಿಯವಾಗಿ ದಲಿತ ಸಾಹಿತ್ಯ ಪರಿಷತ್ತಿನಿಂದ ಕಾರ್ಯಕ್ರಮಗಳು ರೂಪುಗೊಳ್ಳಲಿ ಎಂದರು.  ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷ ಡಾ.ದಯಾನಂದ ಕಿನ್ನಾಳ ಪ್ರಾಸ್ತವಿಕ ನುಡಿಗಳನ್ನಾಡಿದರು.
ಹಿರಿಯ ಲೇಖಕ ಡಾ.ಸಿದ್ಲಿಂಗಪ್ಪ ಕೊಟ್ನೇಕಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಕಸಾಪ ತಾ.ಘಟಕದ ನಿಕಟಪೂರ್ವಾಧ್ಯಕ್ಷ ಡಾ.ಎತ್ನಳ್ಳಿ ಮಲ್ಲಯ್ಯ, ವಿಜಯನಗರ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಧುರಚೆನ್ನಶಾಸ್ತ್ರಿ ಹಿರೇಮಠ, ದಲಿತ ಮುಖಂಡ ತಾಯಪ್ಪ ನಾಯಕ, ಚುಸಾಪ ಜಿಲ್ಲಾಧ್ಯಕ್ಷ ಹಾಲ್ಯಾ ನಾಯ್ಕ, ಕವಿ ಚಂದ್ರಶೇಖರ ರೋಣದಮಠ, ಜಿ.ಯರಿಸ್ವಾಮಿ, ಉದೇದಪ್ಪ, ನಟ ಎಸ್.ಎಸ್.ಚಂದ್ರಶೇಖರ, ಕವಿಯಿತ್ರಿ ಅಂಜಲಿ ಬೆಳಗಲ್, ನೂರ್ ಜಹಾನ್ ಸೇರಿದಂತೆ ಹಲವು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.  ನಾಗರಾಜ ಪತ್ತಾರ್ ಪ್ರಾರ್ಥನೆ ನೆರವೇರಿಸಿಕೊಟ್ಟರೆ, ವಿ.ಪರಶುರಾಮ ವಂದಿಸಿದರು.
ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ
ವಿಜಯನಗರ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿಗೆ ಗೌರವಾಧ್ಯಕ್ಷರಾಗಿ ಡಾ.ಎಸ್.ಡಿ.ಸುಲೋಚನ, ಜಿಲ್ಲಾಧ್ಯಕ್ಷ ಡಾ.ದಯಾನಂದ ಕಿನ್ನಾಳ್, ಉಪಾಧ್ಯಕ್ಷರಾಗಿ ಹೆಚ್.ಸೌಭಾಗ್ಯಲಕ್ಷ್ಮಿ, ಅಂಜಲಿ ಬೆಳಗಲ್, ಪ್ರಧಾನ ಕಾರ್ಯದರ್ಶಿ ವಿ.ಪರಶುರಾಮ್, ಕಾರ್ಯದರ್ಶಿ ಕ್ಯಾದಿಗಿಹಾಳ್ ಉದೇದಪ್ಪ, ಖಜಾಂಚಿ ಜಂಬುನಾಥ, ನಿರ್ದೇಶಕರಾಗಿ ಜಯಶ್ರೀ ರಾಜಗೋಪಾಲ, ಜಿ.ಯರಿಸ್ವಾಮಿ, ಪತ್ರಿಕಾ ಸಲಹೆಗಾರರಾಗಿ ಗೀತಾ ಸುರೇಶ, ಕೃಷ್ಣ ಲಮಾಣಿ, ಪ್ರಕಾಶನ ಸಲಹೆ-ನೂರ್ ಜಹಾನ್, ಸಾಹಿತ್ಯ ಸಲಹೆ-ಡಾ.ಚಿನ್ನಸ್ವಾಮಿ ಸೋಸಲೆ, ಸದಸ್ಯರಾಗಿ ಶೀಲಾ ಮಂಜುನಾಥ ಬಡಗಿ ಮತ್ತು ವಿಶಾಲ್ ಮ್ಯಾಸರ್ ಆಯ್ಕೆಗೊಂಡಿರುವುದನ್ನು ಪ್ರಕಟಿಸಲಾಯಿತು.