ಶ್ರೀ ಆಂಜನೇಯದೇವಸ್ಥಾನಕ್ಕೆ ಭಕ್ತರ ಭೇಟಿ
ಬ್ಯಾಡಗಿ,ಸೆ.2: ರಾಜ್ಯದಲ್ಲಿಯೇ ಸುಪ್ರಸಿದ್ದಿಯಾಗಿರುವ ತಾಲೂಕಿನ ಸುಕ್ಷೇತ್ರ ಕದರಮಂಡಲಗಿ ಗ್ರಾಮದಲ್ಲಿರುವ ಶ್ರೀ ಆಂಜನೇಯ (ಕಾಂತೇಶ) ದೇವಸ್ಥಾನಕ್ಕೆ ಶ್ರಾವಣ ಮಾಸದ ಕೊನೆಯ ಶನಿವಾರದಂದು ಸಾವಿರಾರು ಭಕ್ತರು ಭೇಟಿ ನೀಡಿ ದರ್ಶನವನ್ನು ಪಡೆದರು.
ಅಂದು ಬೆಳಗಿನ ಜಾವ 4 ಗಂಟೆಯಿಂದಲೇ ರಾಣೆಬೆನ್ನೂರು ಅಸುಂಡಿ ರಸ್ತೆಯ ಮೂಲಕ ಹಾಗೂ ಹಾವೇರಿ ಮೋಟೆಬೆನ್ನೂರು ರಸ್ತೆ ಮೂಲಕ ಸುಕ್ಷೇತ್ರ ಕದರಮಂಡಲಗಿ ದೇವಸ್ಥಾನಕ್ಕೆ ತೆರಳಿದ ಭಕ್ತರು ರಾತ್ರಿ 11: ಗಂಟೆಯವರೆಗೂ ಸರದಿ ಸಾಲಿನಲ್ಲಿ ನಿಂತು ಶ್ರೀ ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದರು, ದೇವಸ್ಥಾನದಲ್ಲಿ ಶನಿವಾರ ಕಾಂತೇಶ ಸ್ವಾಮಿಗೆ ವಿಶೇಷ ಅಲಂಕಾರದೊಂದಿಗೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದ್ದರು. ದೇವಸ್ಥಾನಕ್ಕೆ ಬಂದ ಭಕ್ತರಿಗೆಲ್ಲರಿಗೂ ದೇವಸ್ಥಾನ ಸಮಿತಿಯ ವತಿಯಿಂದ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ದೇವಸ್ಥಾನಕ್ಕೆ ಬಂದ ಭಕ್ತರು ಕೂಡ ತಮ್ಮ ಹರಕೆಯಂತೆ ದೋಸೆ, ಉಪ್ಪಿಟ್ಟು, ಪುಳಿಯೋಗರೆ, ಜಿಲೇಬಿ ಹೀಗೆ ವಿವಿಧ ಪದಾರ್ಥದ ಪ್ರಸಾದವನ್ನು ಮಾಡಿಕೊಂಡು ಬಂದು ದೇವಸ್ಥಾನದಲ್ಲಿ ಬಂದ ಭಕ್ತರಿಗೆಲ್ಲ ಪ್ರಸಾದದ ರೂಪದಲ್ಲಿ ಹಂಚುತ್ತಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.
ಈ ದೇವಸ್ಥಾನಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಬ್ಯಾಡಗಿ ಪೆÇಲೀಸ್ ಇಲಾಖೆಯ ಸಿಪಿಐ ಮಹಾಂತೇಶ ಲಂಬಿ, ಪಿಎಸ್‍ಐ ಬಿ.ಎಸ್.ಅರವಿಂದ ಅವರು ಸಿಬ್ಬಂದಿಗಳೊಂದಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಿದ್ದರು.