ಸತ್ರಾಧಾರಿ ಮಳೆಗೆ ಮನೆಗಳಿಗೆ ಹಾನಿ-ಜನ ಜೀವನ ಅಸ್ತವ್ಯಸ್ಥ ಕೋಯ್ಲಿಗೆ ಬಂದ ಹೆಸರು, ಉದ್ದು ರಾಶಿಗೆ ರೈತರು ಹೈರಾಣ
ಆಳಂದ:ಸೆ.2: ಕಳೆದೆರಡು ದಿನಗಳಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಸತ್ರದಾರಿ ಮಳೆಯಿಂದಾಗಿ ವಿವಿಧೆಡೆ ಮನೆಗಳಿಗೆ ಹಾನಿಯಾಗಿದೆ ಮತ್ತು ಸಾರ್ವಜನಿಕ ದೈನಂದಿನ ಚಟುವಟಿಕೆಗೆ ಕುಂಠಿತಗೊಂಡಿದೆ. ಅಲ್ಲದೆ ಕೃಷಿ ಚಟುವಟಿಕೆಗಳಿಗೆ ದೊಡ್ಡ ಹೊಡೆತ ನೀಡಿದೆ.
ಮಳೆಯಿಂದಾಗಿ ಕೆರೆ, ಗೋಕಟ್ಟೆಗಳ ಮತ್ತು ಹಳ್ಳ ನಾಲಾಗಳಲ್ಲಿ ನೀರು ಉಕಿ ಹರಿಯತೊಡಗಿವೆ. ಆದರೆ ಮಳೆಯಿಂದಾಗಿ ಯಾವುದೇ ಜೀವನಹಾನಿಯಾದ ಬಗ್ಗೆ ಇದುವರೆಗೂ ವರದಿ ಲಭ್ಯವಾಗಿಲ್ಲ.
ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾದ ಅಲ್ಪಾವಧಿ ಬೆಳೆ ಹೆಸರು ಉದ್ದು ರಾಶಿಗೆ ಬಂದಿದ್ದು, ಧಾರಾಕಾರ ಮಳೆಯಿಂದಾಗಿ ರಾಶಿಗೆ ಅಡ್ಡಿಯಾಗಿದ್ದು, ಮಳೆ ಬಿಡುವು ನೀಡದೇ ಹೋದಲ್ಲಿ ರಾಶಿಗೆ ಬಂದ ಹೆಸರು ಉದ್ದು ಹಾನಿಯಾಗುವ ಆತಂಕವನ್ನು ಎದುರಾಗಿದೆ.
ತೊಗರಿ, ಉದ್ದು, ಮತ್ತು ಹೆಸರು ಬೆಳೆಗಳಿಗೆ ಮಳೆಯಿಂದಾಗಿ ಹಾನಿಯಾಗುವ ಸಾಧ್ಯತೆ ಉಂಟಾಗಿದೆ, ಇದು ರೈತರಿಗೆ ಸಂಕಷ್ಟದ ಸಮಯವನ್ನು ಸೃಷ್ಟಿಸಿದೆ. ಬಿತ್ತನೆ ಮಾಡಿದ ತೊಗರಿ ಬೆಳೆಗೆ ಹೆಚ್ಚಿದ ಮಳೆಯಿಂದಾಗಿ ಬೆಳೆಗಳು ಅತಿನೀರಿನಿಂದಾಗಿ ಹಾನಿಯಾಗುವ ಆತಂಕ ಎದುರಾಗಿದೆ. ಈ ವರ್ಷದ ತೊಗರಿ ಬೆಳೆ ಉತ್ತಮ ಬರಬಹುದು ಎಂಬ ನಿರೀಕ್ಷೆ ಹೊಂದಿದ್ದ ರೈತರು, ಇದೀಗ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಅಲ್ಲದೆ, ರಾಶಿಗೆ ಬಂದಿರುವ ಉದ್ದು ಮತ್ತು ಹೆಸರು ಬೆಳೆಗಳು ತೀವ್ರ ಮಳೆಯಿಂದಾಗಿ ಹಾನಿಗೊಳಗಾಗುವ ಭೀತಿಯಲ್ಲಿವೆ. ಈ ಬೆಳೆಗಳು ನಾಶವಾದರೆ, ರೈತರಿಗೆ ಆರ್ಥಿಕ ಸಂಕಷ್ಟವು ಎದುರಿಸುವಂತಾಗಿದೆ.
ಮಳೆಯಿಂದಾಗಿ ವಲಯದ ಕೆಲವು ಭಾಗಗಳಲ್ಲಿ ಹೆಚ್ಚು ಮಳೆ ಸುರಿದರೆ, ಕೆಲವು ಭಾಗಗಳಲ್ಲಿ ಕಡಿಮೆ ಮಳೆ ಆಗಿದೆ. ಯಾವುದೇ ರೀತಿಯ ನಿರಂತರ ಮಳೆ ಬೆಳೆಗಳಿಗೆ ಹಾನಿಯ ಮೂಲವಾಗಿದೆ, ಮತ್ತು ರೈತರು ಈ ಸ್ಥಿತಿಗೆ ಗಂಭೀರವಾಗಿ ತತ್ತರಿದ್ದಾರೆ. ರಾಶಿ ಮಾಡಲು ಕೂಲಿಯವರ ಕೊರತೆ ಇದೇ ಕೂಲಿಯವರು ಸಕ್ಕರು ದಿನಕ್ಕೆ 600 ರೂಪಾಯಿ ಕೂಲಿ ಹೊರೆಯ ನಡುವೆ ಬೆಳೆಯ ರಾಶಿಗೆ ಮುಂದಾದ ರೈತರಿಗೆ ಮಳೆಯೂ ಅಡ್ಡಿಯಾಗಿದ್ದು, ಚಿಂತೆಗಿಡು ಮಾಡಿದೆ.
ಮಳೆ ಪ್ರಮಾಣ: ಸೆ. 1ರಂದು ತಾಲೂಕಿನ ಏಳು ಮಳೆಮಾಪನ ಕೇಂದ್ರಗಳ ವಿವಿಧ ಪ್ರದೇಶಗಳಲ್ಲಿ ದಾಖಲಾದ ಮಳೆ ಪ್ರಮಾಣ:ಅಳಂದ ಮಳೆಮಾಪನ ಕೇಂದ್ರವ್ಯಾಪ್ತಿಯಲ್ಲಿ 56.0 ಮಿ.ಮೀ, ಖಜೂರಿ 32.3 ಮಿ.ಮೀ, ನಾರೋಣ .0 ಮಿ.ಮೀ, ನಿಂಬರ್ಗಾ 60.0 ಮಿ.ಮೀ, ಮದನ್ ಹಿಪ್ಪರಗಾ 24.0 ಮಿ.ಮೀ, ಸರಸಂಬಾ 23.2 ಮಿ.ಮೀ, ಕೋರಳ್ಳಿ 25.4 ಮಿ.ಮೀ ಮಳೆಯಾದ ಕುರಿತು ಹವಾಮಾನ ಇಲಾಖೆ ತಿಳಿಸಿದೆ.
12ಮನೆಗಳಿಗೆ ಹಾನಿ: ಮಳೆಯಿಂದಾಗಿ ತಾಲೂಕಿನ ಹಲವಡೆ ಮನೆಗಳ ಬಿದ್ದಿರುವ ಹಾಗೂ ಭಾಗಶಃ ಮನೆಗಳು ಕುಸಿದು ಹಾನಿಯಾದ ಬಗ್ಗೆ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅವರು ತಿಳಿಸಿದ್ದಾರೆ. ತಾಲೂಕಿನ ಎಲೆನಾವದಗಿ ಗ್ರಾಮದಲ್ಲಿ 4 ಮನೆಗಳು, ಕೊಡಲಹಂಗರಗಾ ಗ್ರಾಮದಲ್ಲಿ 3 ಮನೆಗಳು ಬಿದ್ದಿವೆ. ಅಲ್ಲದೆ, ಕಣಮಸ್ ಗ್ರಾಮದಲ್ಲಿ 2 ಮನೆ ಹಾಗೂ ಚಿತಲಿ ಗ್ರಾಮದಲ್ಲಿ 1 ಮನೆ ಭಾಗಶಃ ಮನೆ ಕುಸಿದು ಹಾನಿಯಾಗಿದೆ. ನರೋಣ ಹೋಬಳಿಯ ಕೆರಿ ಅಂಬಲಗಾ ಗ್ರಾಮದಲ್ಲಿ 2 ಮನೆಗಳು ಭಾಗಶಃ ಬಿದ್ದಿರುತ್ತವೆ. ಚಿಂಚನಸೂರ ಗ್ರಾಮದಲ್ಲೂ ಸಹ ಮನೆಗಳು ಭಾಗಶಃ ಹಾನಿಯಾಗಿ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಂಚಾರಕ್ಕೆ ಪ್ರವಾಹ ಅಡ್ಡಿ: ಮಳೆಯ ನೀರಿನ ಪ್ರವಾಹದಿಂದಾಗಿ ಸಾಲೇಗಾಂವ ಗ್ರಾಮದಲ್ಲಿನ ಕೆರೆಯ ನೀರಿನ ಪ್ರವಾಹ ಹರಿದ ಹಿನ್ನೆಲೆಯಲ್ಲಿ ದಿನವೀಡಿ ಗ್ರಾಮ ಸಂಪರ್ಕ ಕಡಿತೊಂಡಿದ್ದು, ಮತ್ತೊಂದಡೆ ಆಳಂದ ಪಟ್ಟಣದ ಧಬ್ಬ, ಧಬ್ಬಿ ಮತ್ತು ಎಚ್‍ಕೆಇ ಡಿಗ್ರಿ ಕಾಲೇಜು ಸಂಪರ್ಕ ಕೆಲಕಾಲ ಕಡಿತೊಂಡಿದ್ದು ಸಂಚಾರಕ್ಕೆ ಜನ ಸಾಮಾನ್ಯರು ಮತ್ತು ವಾಹನ ಸವಾರರು ಪರದಾಡಿದ್ದಾರೆ.