ಸಾಲುಮರಗಳ ಸಾಲು- ಕಾವ್ಯದ ಚೆಲುವು.. ‘ಚತುಷ್ಪಥ’ದಲ್ಲಿ ಅರಳಲಿದೆ ಬಣ್ಣಬಣ್ಣದ ಹೂವು
ಮೇಘಾ ಪಾಲೆತ್ತಾಡಿ
ಪುತ್ತೂರು; ರಸ್ತೆ ಬದಿಗಳಲ್ಲಿ ಸಾಲುಮರಗಳನ್ನು ನೆಡಿಸಿದ ಸಾಮ್ರಾಟ್ ಅಶೋಕಾ ಚರಿತ್ರೆಯಲ್ಲೇ ಅದ್ವಿತೀಯನಾಗಿದ್ದಾನೆ. ಬೆಂಗಳೂರಿನ ರಸ್ತೆ ಬದಿಗಳನ್ನು ಸಾಲುಮರಗಳ ಮೂಲಕ ಸುಂದರವಾಗಿಸಿದ ಸಾಲುಮರದ ತಿಮ್ಮಕ್ಕ ಒಂದು ಚರಿತ್ರೆಯನ್ನೇ ಸೃಷ್ಟಿಸಿದ್ದಾರೆ. ಪುತ್ತೂರು ಉಪ್ಪಿನಂಗಡಿ ರಸ್ತೆ ಬದಿಗಳಲ್ಲಿ ಇದೀಗ ಸಾಲುಮರಗಳನ್ನು ನೆಡಿಸುವ ಮೂಲಕ ಪುತ್ತೂರಿನ ಶಾಸಕ ಅಶೋಕ್ ರೈ ಈ ವಾತಾವರಣಕ್ಕೊಂದು ಕಾವ್ಯದ ಚೆಲುವು ಕೊಡಲು ಹೊರಟಿದ್ದಾರೆ..
ಉಪ್ಪಿನಂಗಡಿ-ಪುತ್ತೂರು ರಸ್ತೆ ಚತುಷ್ಪಥ ರಸ್ತೆಯಾಗಿ ಮಾರ್ಪಾಟುಗೊಳ್ಳುತ್ತಿದೆ. ಈಗಾಗಲೇ ಸ್ವಲ್ಪಭಾಗವನ್ನು ಹೊರತುಪಡಿಸಿ ಬಹುತೇಕ ಭಾಗ ಚತುಷ್ಪಥಗೊಂಡಿದೆ.
ಪುತ್ತೂರಿನ ಬೊಳುವಾರಿನಿಂದ ಹಾರಾಡಿ ತನಕ ರಸ್ತೆ,ನೆಕ್ಕಿಲಾಡಿ ಪೆಟ್ರೋಲ್ ಪಂಪಿನಿಂದ ನೆಕ್ಕಿಲಾಡಿ ಪೇಟೆ ತನಕದ ರಸ್ತೆ ಮಾತ್ರ ಇನ್ನು ಚತುಷ್ಪಥಗೊಳ್ಳಲು ಬಾಕಿ ಇದೆ. ಸೇಡಿಯಾಪು ಎಂಬಲ್ಲಿಂದ ಕೋಡಿಂಬಾಡಿ ಮಹಿಷಮರ್ಧಿನಿ ದೇವಳದ ದ್ವಾರದ ತನಕ ದ್ವಿಪಥ ರಸ್ತೆ ಇದೆ. ಈ ರಸ್ತೆಯೂ ಇದೀಗ ಚತುಷ್ಪಥಗೊಳ್ಳುವ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಹಾಗಾಗಿ ಬೊಳುವಾರು ರೈಲ್ವೇ ರಸ್ತೆಯ ೩೦೦ ಮೀಟರ್ ರಸ್ತೆಯನ್ನು ಹೊರತುಪಡಿಸಿ ಪುತ್ತೂರು-ಉಪ್ಪಿನಂಗಡಿಯ ರಸ್ತೆ ಪೂರ್ಣ ಪ್ರಮಾಣದಲ್ಲಿ ಚತುಷ್ಪಥ ರಸ್ತೆಯಾಗಿ ಮಾರ್ಪಾಟುಗೊಳ್ಳಲಿದೆ.  ಈ ಬಾಕಿಯಾದ ರಸ್ತೆಯ ಭಾಗಗಳನ್ನೂ ಚತುಷ್ಪಥಗೊಳಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಮರಗಳಿದ್ದವು. ಅದರಲ್ಲೂ ಬಹುತೇಕ ಮರಗಳು ಕಾಟುಮಾವಿನ ಮರಗಳು. ಬೃಹತ್ ಆಗಿ ಬೆಳೆದಿದ್ದ ಈ ಕಾಟುಮಾವು ಹಾಗೂ ಇತರ ಮರಗಳನ್ನು ರಸ್ತೆ ಚತುಷ್ಪಥಗೊಳಿಸುವಾಗ ಕಡಿದುರುಳಿಸಲಾಯಿತು. ಈ ರಸ್ತೆಯಲ್ಲಿ ಪಯಣಿಸುತ್ತಿದ್ದಾಗ ಆಹ್ಲಾದಕರವಾಗಿರುತ್ತಿದ್ದ ವಾತಾವರಣ ಸಂಪೂರ್ಣ ಬದಲಾಯಿತು. ಮರಗಳ ಮಾರಣಹೋಮ ನಡೆಯುತ್ತಿದ್ದ ಸಂದರ್ಭ ಪ್ರಶ್ನೆ ಮಾಡಿದವರಿಗೆ ಅರಣ್ಯ ಇಲಾಖೆ ಮುಂದಿನ ವರ್ಷ ಸಾಲುಮರಗಳನ್ನು ನೆಡುವುದಾಗಿ ಭರವಸೆ ನೀಡಿತ್ತು.
ಆದರೆ ಚತುಷ್ಪಥ ರಸ್ತೆಯಾದ ಭಾಗದಲ್ಲಿ ಮರಗಳನ್ನು ಕಡಿದು ಹಾಕಲು ಕಂಡು ಬಂದ ಉತ್ಸಾಹ ಗಿಡಗಳನ್ನು ನೆಡುವಲ್ಲಿ ಕಂಡುಬರಲೇ ಇಲ್ಲ. ಶಕುಂತಳಾ ಶೆಟ್ಟಿ ಶಾಸಕರಾಗಿದ್ದಾಗ ಆರಂಭಗೊಂಡ ಈ ಚತುಷ್ಪಥ ರಸ್ತೆ ಕಾಮಗಾರಿ ಬಳಿಕ ಶಾಸಕ ಸಂಜೀವ ಮಠಂದೂರು ಅವಧಿಯಲ್ಲಿಯೂ ಮುಂದುವರಿಯಿತು. ಆದರೆ ರಸ್ತೆ ಬದಿಯಲ್ಲಿ ಸಾಲುಮರ ನೆಡುವ ‘ಭರವಸೆ’ ಮಾತ್ರ ಹಾಗೆಯೇ ಉಳಿಯಿತು.
ಇದೀಗ ಅಶೋಕ್ ರೈ ಪೂರ್ಣ ಪ್ರಮಾಣದಲ್ಲಿ ಈ ರಸ್ತೆಯ ಎರಡೂ ಬದಿಗಳಲ್ಲಿ ಸಾಲುಮರಗಳನ್ನು ನೆಡುವಂತೆ ಅರಣ್ಯ ಇಲಾಖೆ -ಸಾಮಾಜಿಕ ಅರಣ್ಯ ಇಲಾಖೆಗೆ ಸೂಚಿಸಿದ್ದರು. ಈ ಸಾಲುಮರಗಳ ನೆಡುವಿಕೆ ಕಾಟುಮಾವಿನ ಮರಗಳು ಹಾಗೂ ಹಣ್ಣಿನ ಮರಗಳ ಗಿಡಗಳನ್ನೇ ಬೆಳೆಸಲು ಕಟ್ಟುನಿಟ್ಟಿನ ಸೂಚನೆಯನ್ನೂ ಕೊಟ್ಟರು. ಪರಿಣಾಮ ಸುಮಾರು ೧೫೦ ಗಿಡಗಳನ್ನು ಅರಣ್ಯ ಇಲಾಖೆ ಹಾಗೂ ಸುಮಾರು ೩೦೦ ಗಿಡಗಳನ್ನು ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಪ್ರಸ್ತುತ ಚತುಷ್ಪಥ ರಸ್ತೆಯಾಗಿ ಪರಿವರ್ತಿತವಾದ ಭಾಗದಲ್ಲಿ ನೆಡಲಾಗಿದೆ.  ಕೇವಲ ನೆಟ್ಟದ್ದು ಮಾತ್ರವಲ್ಲ ಅದರ ಸುತ್ತ ಬೇಲಿ ನಿರ್ಮಿಸಿ ರಕ್ಷಣೆಯನ್ನೂ ಮಾಡಲಾಗಿದೆ. ಮಳೆಗಾಲದ ಹಿನ್ನಲೆಯಲ್ಲಿ ಈಗ ಗಿಡಗಳು ಸಮೃದ್ಧವಾಗಿ ಬೆಳೆದು ಇಲ್ಲಿಂದ ಪಯಣಿಸುವ ಪ್ರಯಾಣಿಕರನ್ನು ಕೈಬೀಸಿ ಕರೆಯುತ್ತಿವೆ. ಒಂದರೆಡು ವರ್ಷಗಳಲ್ಲಿ ಈ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆಯುವ ಈ ಹಣ್ಣಿನ ಸಾಲುಮರಗಳು ಮತ್ತೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಹಳೆಯ ವೈಭವವನ್ನು ಮರುಕಳಿಸುವಂತೆ ಮಾಡಲಿವೆ ಎಂಬುವುದು ಆಶಾವಾದ.
ಡಿವೈಡರ್‌ನಲ್ಲಿ ಅರಳಲಿದೆ ಬಣ್ಣ ಬಣ್ಣದ ಹೂವುಗಳು.
.ಉಪ್ಪಿನಂಗಡಿ ಪುತ್ತೂರು ಚತುಷ್ಪಥ ರಸ್ತೆಯ ಮಧ್ಯಭಾಗದಲ್ಲಿ ನಿರ್ಮಿಸಲಾದ ಡಿವೈಡರ್‌ನಲ್ಲಿ ವಿವಿಧ ಬಗೆಯ ಹೂವುಗಳನ್ನು ಬೆಳೆಸಲು ಶಾಸಕ ಅಶೋಕ್ ರೈ ರೂ.೧೦ ಲಕ್ಷ ಅನುದಾನ ತನ್ನ ಶಾಸಕರ ನಿಧಿಯಿಂದ ನೀಡಿದ್ದಾರೆ. ಹಾಗಾಗಿ ಬಣ್ಣ ಬಣ್ಣದ ಹೂವುಗಳು ಈ ರಸ್ತೆಯುದ್ದಕ್ಕೂ ಬೆಳೆದು ಸುಂದರವಾದ ನೋಟವನ್ನು ಸ್ಥಷ್ಟಿಸಲಿವೆ. ಈಗಾಗಲೇ ಈ ಗಿಡಗಳನ್ನು ನೆಡುವ ಕೆಲಸ ಆರಂಭವಾಗಿದೆ. ಮುಂದಿನ ಬೇಸಿಗೆ ಹೊತ್ತಿಗೆ ಇಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ಇಡೀ ವಾತಾವರಣವನ್ನು ‘ಬಣ್ಣದಲೋಕ’ ವನ್ನಾಗಿಸಲಿವೆ. ಡಿವೈಡರ್‌ನಲ್ಲಿ ಹಾಕಲಾದ ಲೈಟಿಂಗ್ ವ್ಯವಸ್ಥೆ ಕೂಡಾ ಈ ರಸ್ತೆಯ ವಾತಾವರಣದ ಚೆಲುವನ್ನು ಮತ್ತಷ್ಟು ಹೆಚ್ಚಿಸಲಿದೆ.  ಆದರೆ ಬೇಸಿಗೆಯಲ್ಲಿ ಈ ಬಣ್ಣ ಬಣ್ಣದ ಹೂವಿನ ಗಿಡಗಳಿಗೆ ನೀರುಣ್ಣಿಸುವ ಕೆಲಸ ನಡೆಯದಿದ್ದರೆ ಬಣ್ಣದ ಬದಲಿಗೆ ಒಣ ಗಿಡಗಳನ್ನಷ್ಟೇ ಕಾಣುವ ಅಪಾಯವೂ ಇಲ್ಲದಿಲ್ಲ.
ಹಣ್ಣಿನ ಗಿಡಗಳಿಗೆ ಆದ್ಯತೆ
ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆಯಲ್ಲಿ ಕೆಲವು ಕಡೆ ಎರಡೂ ಭಾಗಗಳಲ್ಲಿ ಮಾವು, ಕಾಟು ಮಾವು ಕಾಟು, ನೇರಳೆ, ನೆಲ್ಲಿಕಾಯಿ, ಹಲಸು ಸಹಿತ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಶಾಸಕರ ಸೂಚನೆಯಂತೆ ಹಣ್ಣಿನ ಮರಗಳನ್ನೇ ಇಲ್ಲಿ ಸಾಲುಮರಗಳನ್ನಾಗಿಸುವ ಕೆಲಸ ಮಾಡಲಾಗಿದೆ. ಪ್ರಾಣಿ-ಪಕ್ಷಿಗಳಿಗೆ ಇದು ಆಹಾರವಾಗಲಿದೆ. ನೆಟ್ಟ ಗಿಡಗಳ ರಕ್ಷಣೆಗೂ ಕ್ರಮ ಕೈಗೊಳ್ಳಲಾಗಿದೆ. ಉಳಿದ ಭಾಗದಲ್ಲಿಯೂ ಗಿಡಗಳನ್ನು ನೆಡಲಾಗುವುದು- ವಿದ್ಯಾರಾಣಿ ವಲಯಾರಣ್ಯಾಧಿಕಾರಿ ಸಾಮಾಜಿಕ ಅರಣ್ಯ ಪುತ್ತೂರು.