ಪಂಜ ಸಮೀಪದ ಪೊಳೆಂಜದಲ್ಲಿ  ಚಿರತೆ ಹೆಜ್ಜೆ ಗುರುತು ಪತ್ತೆ – ಮೂರು ಸಾಕುನಾಯಿ ನಾಪತ್ತೆ
ಸುಳ್ಯ:ಪಂಜ ಸಮೀಪದ ಪೊಳೆಂಜ ಕಂರ್ಬುನೆಕ್ಕಿಲ ಎಂಬಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಐದು ದಿನಗಳಲ್ಲಿ ವಿದೇಶಿ ತಳಿಯ ಮೂರು ಸಾಕು ನಾಯಿಗಳು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದ್ದು ಜನರಲ್ಲಿ ಭಯ ಹುಟ್ಟಿಸಿದೆ.
ಪಂಜದ ಕಂರ್ಬು ನೆಕ್ಕಿಲ ರಾಮಚಂದ್ರ ಭಟ್ ಎಂಬವರ ಎರಡೂ ವಿದೇಶಿ ತಳಿಯ ನಾಯಿಗಳು ಬುಧವಾರ ರಾತ್ರಿ ಒಟ್ಟಿಗೆ ನಾಪತ್ತೆಯಾಗಿದೆ.  ಐದು ದಿನಗಳ ಹಿಂದೆಯಷ್ಟೇ ಕಂರ್ಬು ನೆಕ್ಕಿಲ ಧನಂಜಯ ಗೌಡ ಎಂಬವರ ಒಂದು ನಾಯಿ ನಾಪತ್ತೆಯಾಗಿದೆ. ಇವರ ಮನೆಯ ಸಿಟೌಟ್‌ನಲ್ಲಿ ಹೊರಳಾಡಿದ ಕುರುಹು ಪತ್ತೆಯಾಗಿತ್ತು. ಇದೇ ಮನೆಯ ಹತ್ತಿರದ ತೋಟದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಗುರುವಾರ ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂರು ನಾಯಿಗಳು ನಾಪತ್ತೆಯಾಗಿರುವುದರಿಂದ ಚಿರತೆ  ಬಗ್ಗೆ ಸಂಶಯ ಮೂಡಿದ್ದು ಜನರು ಭಯಭೀತರಾಗಿದ್ದಾರೆ.