ಪತ್ರಕರ್ತರು ವಾಸ್ತವ ಸ್ಥಿತಿ ಬರೆಯಬೇಕು
ಸಂಜೆವಾಣಿ ನ್ಯೂಸ್
ಮೈಸೂರು: ಸೆ.02:- ಪತ್ರಕರ್ತರು ವಾಸ್ತವ ಸ್ಥಿತಿ ಬರೆಯಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಶರಣಪ್ಪ ವಿ. ಹಲಸೆ ಸಲಹೆ ಮಾಡಿದರು.
ನಗರದ ಶ್ರೀಹರ್ಷ ರಸ್ತೆಯ ಹೋಟೆಲ್ ಗೋವರ್ಧನ್ ಸಭಾಂಗಣದಲ್ಲಿ ಭಾನುವಾರ ಕನ್ನಡಿಗರ ಭುವನ ಸಂಗಾತಿ ಪತ್ರಿಕೆಯ 24ನೇ ವರ್ಷದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ಯಾವುದೇ ಸುದ್ದಿಗಳನ್ನು ತಿರುಚಬಾರದು. ಕಣ್ಣಿನಲ್ಲಿ ನೋಡಿದ್ದನ್ನು, ಕಿವಿಯಲ್ಲಿ ಕೇಳಿದನ್ನು ಬರೆದಾಗ ಮಾತ್ರ ಅತ್ಯುತ್ತಮವಾಗಿರುತ್ತದೆ ಎಂದರು.
ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರಿಪಡಿಸುವ ಪತ್ರಕರ್ತರು ಹಾಗೂ ಪತ್ರಿಕೆಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಅಂಬೇಡ್ಕರ್ ಅವರು ಕಾನೂನು ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯನ್ನು ಕೇಳಿಕೊಂಡು ಕಾನೂನು ಸಚಿವರಾಗಿದ್ದ ಸಿದ್ದಪ್ಪ ಕಂಬಳಿ ಅವರ ಬಳಿ ಬಂದಿದ್ದರು. ಆದರೆ ಅಂಬೇಡ್ಕರ್ ಅವರ ವಿದ್ವತನ್ನು ತಿಳಿದ ಕಂಬಳಿ ಅವರು ಅವರಿಗೆ ಪ್ರಾಧ್ಯಾಪಕ ಹುದ್ದೆಯನ್ನೇ ನೀಡಿದರು. ಇದರಿಂದ ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗುವವರೆಗೂ ಬೆಳೆದರು. ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಅಂಬೇಡ್ಕರ್ ಅವರು ರಾಜ್ಯಸಭಾ ಸದಸ್ಯರಾಗಿ, ಮಂದೆ ಕಾನೂನು ಸಚಿವರಾಗಲು ಕಂಬಳಿ ಅವರ ಕಾರಣ. ಈ ರೀತಿ ಪ್ರತಿಬೆಯನ್ನು ಗುರುತಿಸುವ ಕೆಲಸ ಆಗಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪೆÇ್ರ.ಡಿ. ಆನಂದ್ ಮಾತನಾಡಿ,
ಆರ್ಥಿಕ, ಸಾಮಾಜಿಕ ಬದಲಾವಣೆಯಿಂದ ಪತ್ರಿಕಾರಂಗದ ಪರಿಕಲ್ಬನೆ ಕೂಡ ಬದಲಾಗಿದೆ. ಮೊದಲು ಪತ್ರಿಕೆಯಲ್ಲಿ ಸುದ್ದಿಯಾಗಿದೆ ಎನ್ನುತ್ತಿದ್ದರು. ಈಗ ವೈರಲ್ ಆಗಿದೆ ಎನ್ನುತ್ತಾರೆ. ಅದು ನಿಜವೋ ಅಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಫ್ಯಾಕ್ಟ್ ಚೆಕ್ ಕೂಡ ಬಂದಿದೆ ಎಂದರು.
ಪತ್ರಿಕೆ ನಡೆಸೋದು ಸವಾಲಿನ ಕೆಲಸ. ಅಂಬೇಡ್ಕರ್ ಅವರು ಕೂಡ ಜನತಾ, ಸಮತಾ, ಬಹಿಷ್ಕೃತ ಭಾರತ, ಮೂಕನಾಯಕ, ಪ್ರಬುದ್ಧ ಭಾರತ- ಹೀಗೆ ಐದು ಪತ್ರಿಕೆಗಳನ್ನು ಹೊರತಂದಿದ್ದರು. ಆದರೆ ಅವರು ನಿಧನರಾದಾಗ ಶವಸಂಸ್ಕಾರಕ್ಕೆ ಐದು ಸಾವಿರ ರೂ.ಗಳು ಕೂಡ ಇರಲಿಲ್ಲ ಎಂದರು.
ಬದ್ಧತೆ, ಕಾಳಜಿ ಇದ್ದರೆ ಮಾತ್ರ ಉತ್ತಮ ಪರ್ತಕರ್ತ ಆಗಲು ಸಾಧ್ಯ ಎಂದು ಅವರು, ಪತ್ರಿಕೆಗಳು ಒಂದು ರೀತಿಯಲ್ಲಿ ಬಿಳಿಯ ರಕ್ತಕಣಗಳಿದ್ದಂತೆ. ಇವು ಕಡಿಮೆಯಾದರೆ ಮನುಷ್ಯ ಸಾಯುತ್ತಾನೆ. ಅದೇ ರೀತಿ ಪತ್ರಕರ್ತರು ಸರಿ ಇಲ್ಲದಿದ್ದರೆ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ಆದ್ದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಪತ್ರಿಕೆಗಳು ಇರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪತ್ರಿಕೆಗಳು ಪ್ರಕೃತಿ, ಮಾನವೀಯ ಮೌಲ್ಯ, ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಅಕ್ಷರಲೋಕದಲ್ಲಿ ಅಸ್ಪೃಶ್ಯತೆಯ ಕರಾಳಛಾಯೆ ಎದ್ದು ಕಾಣಿಸುತ್ತಿದೆ. ವಸ್ತುಸ್ಥಿತಿ ಮುಚ್ಚಿಡುತ್ತಿದ್ದಾರೆ. ಇದರ ಬದಲು ಪತ್ರಕರ್ತರು ವಸ್ತುಸ್ಥಿತಿಯನ್ನು ನಿರ್ದಾಕ್ಷಿಣ್ಯವಾಗಿ ಬರೆಯಬೇಕು ಎಂದು ಕರೆ ನೀಡಿದರು.
ಈಗ ಪತ್ರಿಕೆ, ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಯೂನಿವರ್ಸಿಟೆಗಳ ಬದಲು ಗೂಗಲ್ ಯೂನಿವರ್ಸಿಟಿಯಾಗಿದೆ ಎಂದು ಅವರು ವಿಷಾದಿಸಿದರು.
ಪತ್ರಕರ್ತರು ಹಾಗೂ ಪತ್ರಿಕೆಗಳು ವಿಶ್ವಾಸ, ನಂಬಿಕೆ ಉಳಿಸಿಕೊಳ್ಳಬೇಕು. ಜನರು ಕೂಡ ಸ್ವಾಭಿಮಾನಿ, ಸ್ವಂತಿಕೆ ಬೆಳೆಸಿಕೊಳ್ಳಬೇಕು. ಗುಲಾಮಗಿರಿ ಮಾಡಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಳ್ಳೇಗಾಲ ಶಾಸಕ ಎ.ಆರ್. ಕೃ,ಷ್ಣಮೂರ್ತಿ ಮಾತನಾಡಿ, ಸಮಾಜದ ಪರಿವರ್ತನೆಯಲ್ಲಿ ಮಾಧ್ಯಮಗಳ ಪಾತ್ರ ಮಹತ್ತರವಾದುದು. ಆದ್ದರಿಂದ ಪತ್ರಿಕೆಗಳು ಪಾರದರ್ಶಕತೆಯಿಂದ ಕೆಲಸ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪತ್ರಕರ್ತರು ಹಾಗೂ ಪತ್ರಿಕೆಗಳು ಜನರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಮೈಲ್ಯಾಕ್ ನಿವೃತ್ತ ಪ್ರಧಾನ ವ್ಯವಸ್ಥಾಪಕ, ಹವ್ಯಾಸಿ ಬರಹಗಾರ ಸಿ. ಹರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ,
ಪತ್ರಿಕೆಗಳು ಗುಣಮಟ್ಟ ಕಾಪಾಡಬೇಕು. ಓದುಗರಿಗೆ ಒಳ್ಳೆಯ ವಿಚಾರಗಳನ್ನು ನೀಡಬೇಕು ಎಂದರು.
ಪತ್ರಿಕೆಯ ಸಂಪಾದಕ ಸೋಮಯ್ಯ ಮಲೆಯೂರು ಸ್ವಾಗತಿಸಿದರು. ವಿಚಾರಪ್ರಜ್ಞೆ ಪತ್ರಿಕೆ ಸಂಪಾದಕ ರಾ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಖ್ಯಾತ ಗಾಯಕ ಅಮ್ಮ ರಾಮಚಂದ್ರ ಗೀತಗಾಯನ ನಡೆಸಿಕೊಟ್ಟರು.