ಹಿಂದೂ ಧರ್ಮ ಉಳಿಸಲು ಮಕ್ಕಳು ಪಣತೊಡಿ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.02:– ನಮ್ಮ ಧರ್ಮ ಅತ್ಯಂತ ಹಳೆಯದಾದ ಸನಾತನ ಧರ್ಮ, ನಮ್ಮ ಹಿಂದೂ ಧರ್ಮವನ್ನು ಉಳಿಸಲು ಮಕ್ಕಳು ಪಣ ತೊಡಬೇಕು ಎಂದು ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕರೆ ನೀಡಿದರು.
ಅವಧೂತ ದತ್ತಪೀಠದ ವತಿಯಿಂದ ನಡೆದ 10ನೇ ಕರ್ನಾಟಕ ರಾಜ್ಯ ಮಟ್ಟದ ಅಂತರಶಾಲಾ ಸಾಮೂಹಿಕ ಭಜನೆ ಸ್ಪರ್ಧೆಯ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ ವಿಜೇತರಿಗೆ ಮತ್ತು ರಾಜ್ಯಮಟ್ಟದ (ಫೈನಲ್ಸ್ ಅಂತಿಮ) ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ನಮ್ಮ ಧರ್ಮ ಬಿಟ್ಟು ಬೇರೆಡೆಗೆ ಹೋಗಬಾರದು, ಹಾಗೆ ಹೋದರೆ ನಮ್ಮನ್ನು ನಾವು ಕೊಂದುಕೊಂಡಂತೆ ಎಂದು ಹೇಳಿದರು.
ಮಕ್ಕಳಿಂದ ಹಿಡಿದು ಮನೆಯ ಹಿರಿಯರು ಕೂಡ ಭಗವದ್ಗೀತೆ ಓದಬೇಕು, ಕೇಳಬೇಕು, ನಮ್ಮ ಭೂಮಿ ನಮ್ಮ ದೇಶ ಪ್ರೀತಿಸಬೇಕು. ಬೇರೆ ದೇಶಗಳಲ್ಲಿ ಬದುಕುವುದು ಕಷ್ಟ. ನಮ್ಮ ದೇಶದಲ್ಲೇ ಇದ್ದು ನಮ್ಮಲ್ಲಿ ಬೆಳೆದ ಅನ್ನ ತಿನ್ನಬೇಕು ಎಂದು ತಿಳಿ ಹೇಳಿದರು.
ಭಗವದ್ಗೀತೆಯಿಂದ ನಮ್ಮ ದೇಶ ನಮ್ಮ ಧರ್ಮ ಉಳಿಸಬಹುದು, ನಮ್ಮ ಧರ್ಮ ಉಳಿಸಿ ಬೆಳೆಸಿ, ದೇಶದ ಪ್ರಗತಿಗೆ ಶ್ರಮಿಸಿ. ಅಮೆರಿಕದಲ್ಲಿ ಶಾಲೆಯಲ್ಲೇ ಭಗವದ್ಗೀತೆ ಕಲಿಸುತ್ತಾರೆ. ಅಲ್ಲಿನ ಮಕ್ಕಳು ಭಗವದ್ಗೀತೆ ಕಂಠಪಾಠ ಮಾಡಿದ್ದಾರೆ, ಭಗವದ್ಗೀತೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಭಗವದ್ಗೀತೆಯನ್ನು ಶಾಲೆಗಳಲ್ಲಿ ಪರಿಚಯ ಮಾಡಬೇಕು ಎಂದು ಶಿಕ್ಷಕರಿಗೆ ಇದೆ ಎಂದು ತಿಳಿಸಿದರು.
ಅಮೆರಿಕದಲ್ಲಿ ಮೂರು ವರ್ಷದ ಮಗು ಭಗವದ್ಗೀತೆ ಕಂಠಪಾಠ ಮಾಡಿದೆ. ಅದೇ ರೀತಿ ನಾಲ್ಕು ವರ್ಷದ ಒಂದು ಮಗು ಸೌಂದರ್ಯ ಲಹರಿ ಕಲಿತಿದೆ. ಮಾತು ಬಾರದ ಆಟಿಸಂ ಕಾಯಿಲೆ ಉಳ್ಳ ಮಗು ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಕಲಿತು ಹೇಳುತ್ತದೆ. ನನಗೆ ಇದು ಅದ್ಭುತ ಎನಿಸುತ್ತದೆ. ಇದಕ್ಕೆ ಭಗವದ್ಗೀತೆಯಲ್ಲಿರುವ ಶಕ್ತಿ ಕಾರಣ ದಯವಿಟ್ಟು ಎಲ್ಲರೂ ಭಗವದ್ಗೀತೆ ಕೇಳಿ, ಕಲಿಯಿರಿ ಎಂದು ಉಚ್ಛರಿಸಿದರು.
ನಮ್ಮ ಆಶ್ರಮದ ವತಿಯಿಂದಲೇ ಆನ್‍ಲೈನ್ ಮೂಲಕ ಉಚಿತವಾಗಿ ಭಗವದ್ಗೀತೆ ಕಲಿಸಿಕೊಡಲಾಗುತ್ತದೆ. ಎಲ್ಲರೂ ಇದಕ್ಕೆ ನೋಂದಣಿ ಮಾಡಿಕೊಳ್ಳಿ ಎಂದು ಹೇಳಿದರು.
ಮಕ್ಕಳೇ ಯಾರೂ ಕೂಡ ಮೊಬೈಲ್ ಫೆÇೀನ್‍ಗಳನ್ನು ನೋಡಬೇಡಿ. ಅದನ್ನು ಮುಟ್ಟಲೂ ಬೇಡಿ. ಇದರಿಂದ ಸಮಯ ಹಾಳು ಮನಸ್ಸು ಹಾಳು, ಜೀವನವೇ ನಾಶವಾಗಿ ಬಿಡುತ್ತದೆ. ಈಗಲೇ ಇದನ್ನು ಬಿಟ್ಟುಬಿಡಿ, ತಂದೆ ತಾಯಿ ಕೂಡ ಮಕ್ಕಳಿಗೆ ಮೊಬೈಲ್ ಫೆÇೀನ್ ಕೊಟ್ಟು ಅಭ್ಯಾಸ ಮಾಡಬೇಡಿ ಎಂದು ತಿಳಿಸಿದರು.
ಹೆಣ್ಣು ಮಕ್ಕಳು, ಮಹಿಳೆಯರು ಹಣೆಗೆ ಬೊಟ್ಟು ಇಟ್ಟುಕೊಳ್ಳುವುದನ್ನು ಮರೆಯಬಾರದು. ಹೀಗೆ ಹಣೆಯಲ್ಲಿ ತಿಲಕ ಇಟ್ಟುಕೊಂಡರೆ ನಮ್ಮ ಜ್ಞಾಪಕಶಕ್ತಿ ಹೆಚ್ಚಾಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಎಂದರು.
ದಿವ್ಯ ನಾಮ ಸಂಕೀರ್ತನೆ ಭಗವಂತನೆಡೆಗೆ ತೆರಳಲು ಸುಲಭದ ದಾರಿಯಾಗಿದೆ. ಇದು ಜ್ಞಾನ ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ಇದನ್ನು ಹೆಚ್ಚು ಪ್ರಚಾರ ಮಾಡಬೇಕು. ಮಕ್ಕಳೇ ಕೆಟ್ಟ ದಾರಿಗೆ ಹೋಗದೆ ನಮ್ಮ ಧರ್ಮವನ್ನು ಕಾಪಾಡಿ ಎಂದು ಹೇಳಿದರು.
ಯಾವುದೇ ಮಗು ತನಗೆ ಬಹುಮಾನ ಬರಲಿಲ್ಲ ಎಂದು ಚಿಂತೆ ಮಾಡಬಾರದು. ಖಿನ್ನತೆಗೆ ಒಳಗಾಗಬಾರದು. ಇಲ್ಲಿ ಬಂದು ಪ್ರಯತ್ನ ಮಾಡಿರುವುದೇ ಒಂದು ಪುಣ್ಯ ಹಾಗಾಗಿ ಮತ್ತೆ ಮತ್ತೆ ಪ್ರಯತ್ನ ಮಾಡಿ ಮುಂದೆ ಬನ್ನಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಹಿತವಚನ ಹೇಳಿದರು
ರಾಜ್ಯದ 25 ಜಿಲ್ಲೆಗಳಲ್ಲಿ ಜುಲೈ-ಆಗಸ್ಟ್‍ನಲ್ಲಿ ನಡೆದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಜಿಲ್ಲಾ ಮಟ್ಟದ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಶ್ರೀಗಳು ವಿತರಿಸಿ ಮಕ್ಕಳನ್ನು ಆಶೀವರ್ದಿಸಿದರು. ಶನಿವಾರ ನಡೆದ ರಾಜ್ಯಮಟ್ಟದ ಅಂತಿಮ ಭಜನೆ ಗಾಯನ ಸ್ಪರ್ಧೆಯ ಜೂನಿಯರ್ ಮತ್ತು ಸೀನಿಯರ್ ವಿಭಾಗದ ಫಲಿತಾಂಶವನ್ನು ದತ್ತಪೀಠ ಆಸ್ಥಾನ ವಿದ್ವಾನ್ ಶಂಕರ್ ರಮೇಶ್ ನೀಡಿದರು.
ಭಜನೆ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯ ಶಾಲೆ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ಮೈಸೂರಿನ ಡಿಎವಿ ಪಬ್ಲಿಕ್ ಸ್ಕೂಲ್ ಪಡೆದುಕೊಂಡಿತು. ಮೂರನೇ ಬಹುಮಾನವನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಪಡೆದುಕೊಂಡಿತು. ಜೂನಿಯರ್ ವಿಭಾಗದಲ್ಲಿ ಮೊದಲನೇ ಬಹುಮಾನವನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಬೆಂಗಳೂರಿನ ವಿಇಎಸ್ ಮಾಡೆಲ್ ಕಾನ್ವೆಂಟ್ ಮತ್ತು ಮಂಗಳೂರಿನ ಶಾರದ ವಿದ್ಯಾಲಯ ಪಡೆದುಕೊಂಡವು. ಮೂರನೇ ಬಹುಮಾನವನ್ನು ಬಳ್ಳಾರಿಯ ಡ್ರೀಮ್ ವರ್ಲ್ಡ್ ಸ್ಕೂಲ್ ಪಡೆದುಕೊಂಡಿತು.
ಇದೇ ವೇಳೆ ಪಕ್ಕವಾದ್ಯ ನುಡಿಸಿದ ಎಲ್ಲರಿಗೂ ವಿಶೇಷ ಬಹುಮಾನ ವಿತರಿಸಲಾಯಿತು.