ಸಿದ್ದರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುತ್ತೇನೆ: ದೇಶಪಾಂಡೆ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.02:- ಸಿಎಂ ಸ್ಥಾನದ ಬದಲಾವಣೆ ಪ್ರಶ್ನೆಯೇ ಇಲ್ಲ. ಒಂದು ವೇಳೆ ಬದಲಾದರೆ ಹೈಕಮಾಂಡ್ ಒಪ್ಪಿ, ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದರು.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಸ್ನೇಹಿತ. 5 ವರ್ಷ ಸಿಎಂ ಆಗಿ ಅವರೇ ಇರುತ್ತಾರೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆಯೇ ಚರ್ಚೆಯಾಗಿಲ್ಲ. ನನಗೆ ಗೊತ್ತಿಲ್ಲದೆ ಅಂತಹ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಸತೀಶ ಜಾರಕಿಹೊಳಿ ನಡೆಸಿರುವ ಸಭೆ ಇಲಾಖೆಗಳಿಗೆ ಸಂಬಂಧಪಟ್ಟಿದ್ದಷ್ಟೆ. ಸಿದ್ದರಾಮಯ್ಯ ಅವಧಿ ಪೂರೈಸುತ್ತಾರೆ ಎಂದು ತಿಳಿಸಿದರು.
ನಾನು ಸಿದ್ದರಾಮಯ್ಯ ಅವರಿಗಿಂತ ಎರಡು ವರ್ಷ ದೊಡ್ಡವನು. ಸಚಿವ ಆಗಿ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕಷ್ಟೆ. ಎಲ್ಲರಂತೆಯೇ ನನಗೂ ಆಸೆ ಇದೆ.
ಜತೆಗೆ ಜನರಿಗೂ ನಾನು ಸಿಎಂ ಆಗಬೇಕು ಎಂಬ ಆಸೆ ಇದೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು ಎನ್ನುವ ಮೂಲಕ ಪರೋಕ್ಷವಾಗಿ ಸಿಎಂ ಸ್ಥಾನದ ಆಸೆ ವ್ಯಕ್ತಪಡಿಸಿದರು.
ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ತಪ್ಪೇ ಮಾಡಿಲ್ಲ ಎಂದು ಸಮರ್ಥಿಸಿಕೊಂಡ ಅವರು, ಸಾವಿರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನುತ್ತಿರುವವರು, ಆರೋಪದ ಬಗ್ಗೆ ದಾಖಲೆ ಕೊಟ್ಟರೆ ನಾನೇ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದರು.
ಟೆಲಿಫೆÇೀನ್ ಕದ್ದಾಲಿಕೆ ಆರೋಪ ಬಂದ ತಕ್ಷಣ ರಾಮಕೃಷ್ಣ ಹೆಗೆಡೆ ರಾಜೀನಾಮೆ ಕೊಟ್ಟಿದ್ದರು. ಈಗ ದಿನವೂ ಫೆÇೀನ್ ಕದ್ದಾಲಿಕೆ ನಡೆಯುತ್ತಿದೆ. ಈಗ ಮೌಲ್ಯ ಆಧರಿತ ರಾಜಕಾರಣ ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿಗೆ ತೊಂದರೆಯಾಗುತ್ತಿದೆ ಎಂದು ಆರೋಪದ ಕುರಿತು ಪ್ರತಿಕ್ರಿಯಿಸಿ, ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿರುವುದು ನಿಜ. ಗ್ಯಾರಂಟಿ ಯೋಜನೆಗೆ 50ರಿಂದ 60ಸಾವಿರ ಕೋಟಿ ಬೇಕಾಗಿದೆ. ತೊಂದರೆಯಾಗಿರುವುದನ್ನು ಸರಿದೂಗಿಸುತ್ತಿದ್ದಾರೆ.
ಆದರೆ ಬೆಲೆ ಏರಿಕೆಗೆ ಕಾರಣ ಗ್ಯಾರಂಟಿ ಯೋಜನೆಗಳಲ್ಲ. ದೇಶದಲ್ಲೇ ಬೆಲೆ ಏರಿಕೆ ಆಗಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದರು.