ನಗರದಲ್ಲಿ ಅಂತಾರಾಷ್ಟ್ರೀಯ ಶಾಂತಿ ದಿವಸ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.02:- ಕಾರ್ಮಿಕ ಸಂಘಟನೆಗಳ ಅಂತಾರಾಷ್ಟ್ರೀಯ ಶಾಂತಿಯ ದಿವಸವನ್ನು ಸಿಐಟಿಯು ಜಿಲ್ಲಾ ಸಮಿತಿಯಿಂದ ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಭಾನುವಾರ ಆಚರಿಸಲಾಯಿತು.
ಈ ವೇಳೆ ಯುದ್ಧ ಬೇಡ ಶಾಂತಿ ಬೇಕು, ಸಾಮ್ರಾಜ್ಯಶಾಹಿ ಯುದ್ಧಕೋರ ನೀತಿಗೆ ಧಿಕ್ಕಾರ ಕೂಗಿದರು. ಅಲ್ಲದೆ, ಪ್ಯಾಲೆಸ್ಟೈನ್ ನರಮೇಧವನ್ನು ತೀವ್ರವಾಗಿ ಖಂಡಿಸಿದರು. ಪ್ರತಿ ವರ್ಷ ಸೆ.1ರಂದು ಕಾರ್ಮಿಕ ಸಂಘಟನೆಗಳ ಅಂತಾರಾಷ್ಟ್ರೀಯ ಶಾಂತಿಗಾಗಿ, ಸೌಹಾರ್ದತೆಗಾಗಿ ಆಚರಿಸುತ್ತಿದೆ. ಈ ವರ್ಷ ಡಬ್ಲ್ಯೂಎಫ್‍ಟಿಯು ತನ್ನ ತಾಯಿ ನಾಡಿನಲ್ಲಿ ನರಮೇಧ ಅನುಭವಿಸುತ್ತಿರುವ ಪ್ಯಾಲೆಸ್ಟೈನ್ ಜನತೆಗೆ ಸೌಹಾರ್ದತೆ ವ್ಯಕ್ತಪಡಿಸಲು ಕರೆ ನೀಡಿದೆ. ಇಸ್ರೇಲ್ ಹಾಗೂ ನ್ಯಾಟೋ ಜೊತೆಗಾರರಿಂದ ಪ್ಯಾಲೆಸ್ಟೈನ್ ದೇಶದ ನಾಗರಿಕರು ತಮ್ಮ ದೇಶದಲ್ಲೇ ಪರಕೀಯರಾಗುತ್ತಿದ್ದಾರೆ. ಅಮೆರಿಕಾ ನಾಯಕತ್ವದ ಯುದ್ಧ ಕೋರ ನೀತಿಗಳು ಅಲ್ಲಿಯ ಜನರ ಬದುಕನ್ನು ತಿಂದು ಹಾಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಹೀಗಾಗಿ, ಪ್ಯಾಲೆಸ್ಟೈನ್ ಜನತೆಯ ಮೇಲೆ ನಡೆಯುತ್ತಿರುವ ನರಮೇಧ ನಿಲ್ಲಬೇಕು. ಸಾಮ್ರಾಜ್ಯಶಾಹಿ ಯುದ್ಧಗಳು ಹಾಗೂ ಅವರ ಪ್ರಚೋದನೆ ನಿಲ್ಲಬೇಕು. ಜಗತ್ತಿನ ಸಂಪನ್ಮೂಲಗಳನ್ನು ಮಾನವ ಬದುಕಿನ ಒಳತಿಗಾಗಿ ಬಳಸಬೇಕು. ಸಾಮ್ರಾಜ್ಯಶಾಹಿ ಯುದ್ಧಗಳು ಕೊನೆಗಳ್ಳಲಿ, ತನ್ನ ತಾಯಿನಾಡನ್ನು ಪ್ಯಾಲೆಸ್ಟೈನರು ಪಡೆಯುವಂತಾಗಲಿ ಎಂದು ಆಗ್ರಹಿಸಿದರು.
ಈ ವೇಳೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ.ಬಾಲಾಜಿ ರಾವ್, ಜಿಲ್ಲಾ ಖಜಾಂಚಿ ಅಣ್ಣಪ್ಪ, ತಾಲೂಕು ಅಧ್ಯಕ್ಷ ಮೆಹಬೂಬ್, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಮುಖಂಡರಾದ ಲ.ಜಗನ್ನಾಥ್, ಎನ್.ವಿಜಯ್ ಕುಮಾರ್, ಜಿ.ರಾಜೇಂದ್ರ, ಎನ್.ಸುಬ್ರಹ್ಮಣ್ಯ, ರಾಘವೇಂದ್ರ, ಶ್ರೀಕಾಂತ್, ರವಿಶಂಕರ್, ಮಹದೇವಯ್ಯ ಮೊದಲಾದವರು ಇದ್ದರು.