ವೃತ್ತಿ ಆರಂಭಿಸಿದ ಶಾಲೆಯಲ್ಲೇ ನಿವೃತ್ತನಾದ ಗುರುವಿಗೆ ಚಿನ್ನದ ಕಾಣಿಕೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.02- ತಾವು ವೃತ್ತಿ ಆರಂಭಿಸಿದ ಶಾಲೆಯಲ್ಲಿ 27 ವರ್ಷ ಸೇವೆ ಸಲ್ಲಿಸಿ ಅದೇ ಶಾಲೆಯಲ್ಲಿ ನಿವೃತ್ತಿ ಪಡೆದ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ತಾಲೂಕಿನ ಹಿರೇಬೇಗೂರು ಗ್ರಾಮದ ಶಾಲೆಯ ಶಿಕ್ಷಕ ಬಿ. ಕಾಶೀಆರಾಧ್ಯ ಸದರಿ ಶಾಲೆಯಲ್ಲಿ 27 ವರ್ಷ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ವಯೋ ನಿವೃತ್ತಿ ಹೊಂದಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಹಳೆ ವಿದ್ಯಾರ್ಥಿಗಳು ಅದ್ದೂರಿಯಾಗಿ ಬೀಳ್ಕೋಟ್ಟರು.
ಗ್ರಾಮದ ಶಾಲೆಯಲ್ಲಿ ಹಾಗೂ ಗ್ರಾಮದಲ್ಲಿ ಹಬ್ಬದ ವಾತಾವರಣ ಇತ್ತು. ನಿವೃತ್ತ ಶಿಕ್ಷಕರಿಗೆ ಮಧ್ಯಾಹ್ನ ಅದ್ದೂರಿ ಕಾರ್ಯಕ್ರಮ ಮಾಡಿ, ನಿವೃತ್ತ ಶಿಕ್ಷಕ ಕಾಶಿ ಆರಾಧ್ಯರ ಸೇವೆಯನ್ನು ಗುಣಗಾನ ಮಾಡಿ, ಗೌರವ ಸಮರ್ಪಣೆಯೊಂದಿಗೆ ಚಿನ್ನದ ಉಂಗುರ ತೊಡಿಸಿದರು.
27 ವರ್ಷ ಕಾಲ್ನಡಿಗೆ ಮೂಲಕ ಸಮಯಪಾಲನೆ: ಕಾಶಿ ಆರಾಧ್ಯ ಅವರು ಮೂಲತಃ ಚಾಮರಾಜನಗರ ತಾಲೂಕಿನ ಕೆಬ್ಬೇಪುರ ಗ್ರಾಮದವರಾಗಿದ್ದು, ಕೆಬ್ಬೇಪುರದಿಂದ ಹಿರೇಬೇಗೂರಿಗೆ 27 ವರ್ಷ ನಿತ್ಯ 8 ಕಿ.ಮೀ ಕಾಲ್ನಡಿಗೆಯಲ್ಲೇ ಬರುತ್ತಿದ್ದರು. ಇವರ ಬಳಿ ಸೈಕಲ್, ಸ್ಕೂಟರ್ ಯಾವುದೂ ಇಲ್ಲಾ. ಬಸ್ ಮತ್ತು ಇತರೆ ವಾಹನಕ್ಕಾಗಿ ಕಾಯದೇ ಸರಿಯಾದ ಸಮಯಕ್ಕೆ ಶಾಲೆಗೆ ಆಗಮಿಸುತ್ತಿದ್ದರು. ಇವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರ ಮನ ಗೆದ್ದಿದ್ದ ಕಾಶಿ ಆರಾಧ್ಯರಿಗೆ ಜನರು ತುಂಬು ಪ್ರೀತಿ, ಭಾರದ ಮನಸ್ಸಿನಿಂದ ಬೀಳ್ಕೊಟ್ಟರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಾ.ನಗರ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ ಮಾತನಾಡಿ, ತಾಯಿ ನಂತರ ಸ್ಥಾನವೇ ಗುರುವಿಗೆ ನೀಡಲಾಗಿದೆ. ಗುರು ಶಿಕ್ಷಣವನ್ನು ಕಲಿಸುವ ಜೊತೆಗೆ ಮಕ್ಕಳಿಗೆ ವಿನಯ, ಪ್ರೀತಿ ಮತ್ತು ಸನಡತೆಯನ್ನು ಹೇಳಿಕೊಡುವ ಮೂಲಕ ಸಮಾಜದ ಉತ್ತಮ ಪ್ರಜೆಯಾಗಿ ರೂಪಿತ್ತಾರೆ. ಅಂಥ ಸಾರ್ಥಕವಾದ ಸೇವೆಯನ್ನು ಕಾಶಿ ಆರಾಧ್ಯರು ಕಳೆದ 27 ವರ್ಷಗಳಿಂದ ಸಲ್ಲಿಸಿ, ನಿವೃತ್ತಿ ಹೊಂದುತ್ತಿದ್ದಾರೆ. ಅವರ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಆಶಿಸಿದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಕಾಶಿ ಆರಾಧ್ಯರು ಶಿಕ್ಷಕ ವೃತ್ತಿಗೆ ಹೆಚ್ಚಿನ ಗೌರವವನ್ನು ತಂದುಕೊಟ್ಟಿದ್ದಾರೆ. ಅವರಂಥ ಶಿಕ್ಷಕರು ಇದ್ದರೆ ಸರ್ಕಾರಿ ಶಾಲೆಗಳು ಇನ್ನು ಹೆಚ್ಚಿನ ಪ್ರಗತಿಯನ್ನು ಹೊಂದುತ್ತವೆ. ಪಕ್ಕದ ಗ್ರಾಮದ ಕೆಬ್ಬೇಪುರ ನಿವಾಸಿಯಾಗಿರುವ ಅವರು ಹಿರೇಬೇಗೂರಿಗೆ ಪ್ರತಿದಿನ 8 ಕಿಲೋ ಮೀಟರ್ ಕಾಲ್ನಡಿಗೆಯಲ್ಲೇ ಆಗಮಿಸಿ, ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಅವರ ಸೇವೆಯನ್ನು ಗ್ರಾಮಸ್ಥರೆಲ್ಲರು ಹತ್ತಿರದಿಂದ ನೋಡಿದ್ದೇವೆ. ಇಂಥ ಶಿಕ್ಷಕರು ನಮ್ಮ ಶಾಲೆಯಲ್ಲಿದ್ದು ನಮ್ಮ ಪುಣ್ಯ ಎಂದರು.
ನೆಚ್ಚಿನ ಶಿಕ್ಷಕರ ಕುರಿತು ಶಾಲೆಯ ವಿದ್ಯಾರ್ಥಿ ಮಧು ಎಂಬುವರು ಮಾತನಾಡಿ, ಕಾಶಿ ಗುರುಗಳು ಕಳೆದ 26 ವರ್ಷಗಳಿಂದ ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿತ್ಯ ನಮ್ಮ ಶಾಲೆಗೆ ನಡೆದುಕೊಂಡೇ ಬರುತ್ತಿದ್ದರು. ಬಸ್, ಬೈಕ್ ಕೂಡ ಹತ್ತುತ್ತಿರಲಿಲ್ಲ. ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಅವರು ಕೇವಲ ಪಾಠ ಮಾತ್ರ ಮಾಡುತ್ತಿರಲಿಲ್ಲ, ವಿದ್ಯಾರ್ಥಿಗಳ ಕಷ್ಟಕ್ಕೂ ಸ್ಪಂದಿಸುತ್ತಿದ್ದರು. ಶಾಲೆಯ ಮೇಲೆ ಅವರ ಅಭಿಮಾನ ಎಷ್ಟಿತ್ತಿಂದರೆ ಗ್ರಾಮದ ಮಹಿಳೆಯರಿಗೆ ಇಂದು ಅರಿಶಿನ, ಕುಂಕುಮ ನೀಡಿದರು. ಅವರ ನಿವೃತ್ತಿ ಜೀವನ ಸುಖದಿಂದ ಕೂಡಿರಲಿ ಎಂದು ಪ್ರಾರ್ಥಿಸಿದರು.
ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಸಮವಸ್ತ್ರ : ವಯೋ ನಿವೃತ್ತಿ ಹೊಂದಿದ ಶಿಕ್ಷಕ ಕಾಶಿ ಆರಾಧ್ಯರು ಸಹ ತಮ್ಮ ನಿವೃತ್ತಿ ದಿನದಂದು ಶಾಲೆಯ ಎಲ್ಲ ಮಕ್ಕಳಿಗೆ ಸ್ವಂತ ಹಣದಲ್ಲಿ ಸಮವಸ್ತ್ರ ನೀಡಿದರು. ಶಾಲೆಯ ಬಿಸಿಯೂಟ ತಯಾರಿಸುವ ಎಂಟು ಮಹಿಳಾ ನೌಕರರಿಗೆ ಸೀರೆ ವಿತರಿಸಿದರು ಹಾಗೂ ಹಿರೇಬೇಗೂರು ಗ್ರಾಮದ ಮಹಿಳೆಯರಿಗೆ ಗೌರಿ ಹಬ್ಬದ ಪ್ರಯುಕ್ತ ರವಿಕೆ, ಬಳೆ ಹೊಂದಿಗೆ ಬಾಗಿನಿ ನೀಡಿದರು.
ಹಳೆಯ ವಿದ್ಯಾರ್ಥಿಗಳಿಂದ ಚಿನ್ನದ ಉಂಗುರ ಉಡುಗೊರೆ : ನಿವೃತ್ತ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳು ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಿ ಗೌರವ ಸಮರ್ಪಿಸಿದರು.
ಇದೇ ಸಮಾರಂಭದಲ್ಲಿ ಕಾಶಿ ಆರಾಧ್ಯ ಅವರು ತಮ್ಮ ಶಾಲೆಯ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಸ್ವಂತ ಹಣದಿಂದ ಸಮವಸ್ತ್ರ ವಿತರಿಸಿದರು. ಜೊತೆಗೆ, ಬಿಸಿಯೂಟ ತಯಾರಿಸುವ 8 ಮಹಿಳಾ ಸಿಬ್ಬಂದಿಗೆ ಸೀರೆ ವಿತರಿಸಿ ಶಾಲೆ ಮತ್ತು ಅಲ್ಲಿನ ಸಿಬ್ಬಂದಿ ಸೇರಿದಂತೆ ಎಲ್ಲರ ಪ್ರೀತಿ, ಗೌರವವನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆÀಟ್ಟಿ, ಗೌಡಿಕೆ ಪ್ರಸಾದ್, ತಾ.ಪಂ. ಮಾಜಿ ಸದಸ್ಯ ಸೋಮಶೇಖರ್, ಗಿರೀಶ್ ಆರಾಧ್ಯ, ಎಲ್ಲಾ ಕೋಮಿನ ಯಜಮಾನರು ಹಾಗೂ ಗ್ರಾಮದ ಮುಖಂಡರು, ಸಹ ಶಿಕ್ಷಕರು ಹಾಗೂ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.