ಶಿಕ್ಷಣಕ್ಕೆ ಪ್ರತ್ಯೇಕ ಬಜೆಟ್‌ ಮಂಡಿಸುವಂತೆ ಸಲಹೆ
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ.2;ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಶಿಕ್ಷಣಕ್ಕೆ ಪ್ರತ್ಯೇಕ ಬಜೆಟ್‌ ಮಂಡಿಸುವಂತೆ ಬೆಳಗಾವಿ ಜಿಲ್ಲೆಯ ರಾಯಭಾಗದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಶಿಕ್ಷಕ ವೀರಣ್ಣ ಮಡಿವಾಳರ ಒತ್ತಾಯಿಸಿದ್ದಾರೆ.ನಗರದ ಜಿಲ್ಲಾ ಗುರು ಭವನದಲ್ಲಿ ಕರ್ನಾಟಕ ರಕ್ಷಮಾ ವೇದಿಕೆ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯ ಕನ್ನಡ ಐಚ್ಛಿಕ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕಾರ ಜ್ಞಾನಕಾಶಿ ಪ್ರಶಸ್ತಿ ಹಾಗೂ ಸನ್ಮಾನ ಸಮಾರಂಭದಲ್ಲಿ ಶಿಕ್ಷಣದ ಕ್ರಾಂತಿಯ ಹರಿಕಾರ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪುರಸ್ಕೃತರಾಗಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಸರ್ಕಾರವು ಶಿಕ್ಷಣಕ್ಕಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದರು.ದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಅಭಿವೃದ್ಧಿ ಹೊಂದಿವೆ. ಅದೇ ರೀತಿ ಆಂಧ್ರ ಪ್ರದೇಶ, ಕೇರಳದಲ್ಲೂ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಅಭಿವೃದ್ಧಿಪಡಿಸಿ, ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಬೇಕಾಗಿದ್ದ ಸರ್ಕಾರಿ 13 ಸಾವಿರ ಸರ್ಕಾರಿ ಶಾಲೆಗಳನ್ನೇ ಮುಚ್ಚಲು ಹೊರಟಿತ್ತು. ಅದನ್ನು ವಿರೋಧಿಸಿ ಸಣ್ಣದಾದ ಕವಿತೆ ಬರೆದಿದ್ದ ತಮ್ಮ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಆಗ ನಾಡಿನ ಜನರು ತಮ್ಮ ಪರ ನಿಂತಿದ್ದರಿಂದ ಸರ್ಕಾರಿ ಶಾಲೆಗಳಿಗೆ ಬಲ ತುಂಬುವ ಕೂಗು ಒಕ್ಕೊರಲಿನಿಂದ ಕೇಳಿ ಬಂದಿತು ಎಂದು ಅವರು ತಿಳಿಸಿದರು.ರಾಜ್ಯ ಸರ್ಕಾರದ ಅಧಿಕಾರಿಗಳು, ನೌಕರರು ತಮ್ಮ ಮಕ್ಕಳನ್ನೂ ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು. ಅಲ್ಲದೇ, ಇಡೀ ರಾಜ್ಯವ್ಯಾಪಿ ಸರ್ಕಾರಿ ನೌಕರರು ತಮ್ಮ ಒಂದು ತಿಂಗಳ ವೇತನವನ್ನು ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಲು ನೀಡಿದರೆ ಇಡೀ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಚಿತ್ರಣವನ್ನೇ ಬದಲಿಸಬಹುದು. ಸರ್ಕಾರಿ ಅಧಿಕಾರಿಗಳು, ನೌಕರರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಓದಿಸಲು ಮುಂದಾಗಬೇಕು. ಅದೇ ರೀತಿ ಶಿಕ್ಷಕರು ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಸರ್ಕಾರವೂ ತನ್ನದೇ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡಲಿ ಎಂದು ಅವರು ಆಗ್ರಹಿಸಿದರು.ಸಮಾರಂಭ ಉದ್ಘಾಟಿಸಿದ ವರದಿಗಾರರ ಕೂಟದ ಅಧ್ಯಕ್ಷ, ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್.ಬಡದಾಳ್ ಮಾತನಾಡಿ, ಕನ್ನಡ ಪರ ಹೋರಾಟಕ್ಕಷ್ಟೇ ಕರವೇ ಸೀಮಿತವಾಗದೇ ಈ ನೆಲದಮಕ್ಕಳ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಮಾದರಿ ಕೆಲಸ ಮಾಡುತ್ತಿದೆ. ಹಿಂದೆಲ್ಲಾ ಅಂಕಗಳಿಗೆ ಅಷ್ಟಾಗಿ ಯಾರೂ ಗಮನ ನೀಡುತ್ತಿರಲಿಲ್ಲ. ಆದರೆ, ಇಂದು ಎಲ್ಲದಕ್ಕೂ ಅಂಕಗಳಿಗೆ ಪ್ರಾಧಾನ್ಯತೆ ಇತ್ತು, ಸರ್ಕಾರಿ ಉದ್ಯೋಗ, ಉನ್ನತ ಶಿಕ್ಷಣ ಹೀಗೆ ಎಲ್ಲದಕ್ಕೂ ಹೆಚ್ಚು ಅಂಕಗಳಿಕೆಯೇ ಮಾನ ದಂಡವಾಗಿದೆ. ಅಂಕಗಳು ಅತೀ ಮುಖ್ಯವೆಂಬ ಅರಿವು ವಿದ್ಯಾರ್ಥಿಗಳಲ್ಲಿ ಇರಬೇಕು. ಉತ್ತಮವಾಗಿ ಓದಿ, ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಿ ಎಂದರು.
