ಶರಣಸಂಸ್ಥಾನದ ದಾಸೋಹ ಜ್ಞಾನರತ್ನ ಶ್ರೇಷ್ಠ ಪತ್ರಿಕೆ
ಕಲಬುರಗಿ:ಸೆ.1:ಶರಣಬಸವೇಶ್ವರ ಸಂಸ್ಥಾನದಿಂದ ಹೊರ ಬರುತ್ತಿರುವ ದಾಸೋಹ ಜ್ಞಾನರತ್ನ ಪತ್ರಿಕೆ ಈ ಭಾಗದಲ್ಲಿಯೇ ಶ್ರೇಷ್ಠ ಪತ್ರಿಕೆಯಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಚಿದಾನಂದ ಚಿಕ್ಕಮಠ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ʼದಾಸೋಹ ಜ್ಞಾನರತ್ನ ʼ ಎಂಬ ವಿಷಯ ಕುರಿತು ಮಾತನಾಡಿದರು.
ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು 1996 ಮಾರ್ಚ ತಿಂಗಳ ಯುಗಾದಿಯಂದು ದಾಸೋಹ ಜ್ಞಾನರತ್ನ ಎಂಬ ಪಾಕ್ಷಿಕ ಪತ್ರಿಕೆಯನ್ನು ಆರಂಭಿಸಿದರು. ಸಾಹಿತ್ಯ, ಧಮ, ಸಂಸ್ಕೃತಿ, ತತ್ವಜ್ಞಾನವನ್ನು ಜನರಿಗೆ ತಿಳಿಸಬೇಕೆಂಬ ಉದ್ದೇಶದಿಂದ ಪತ್ರಿಕೆಯನ್ನು ಪ್ರಾರಂಭಿಸಿದರು. ಎಲ್ಲ ಧರ್ಮಗಳ ತಾತ್ವಿಕ ದರ್ಶನವನ್ನು ಈ ಪತ್ರಿಕೆ ಹೊಂದಿದೆ. ಕನ್ನಡ, ಆಂಗ್ಲಭಾμÉಯಲ್ಲಿ ಏಕಕಾಲಕ್ಕೆ ಮುದ್ರಣಗೊಳ್ಳುತ್ತದೆ. 10 ಸಾವಿರ ಅಜೀವ ಸದಸ್ಯರು ಈ ಪತ್ರಿಕೆಗಿದ್ದಾರೆ. ಪಾಕ್ಷಿಕ ಪತ್ರಿಕೆಗಳಲ್ಲಿಯೇ ಇದು ಅತಿಹೆಚ್ಚು ಪ್ರಸಾರವಾಗುವ ಪತ್ರಿಕೆಯಾಗಿದೆ. ಜನಸಾಮಾನ್ಯರಿಗೆ ಓದಲು ಅವಕಾಶವಾಗುವಂತೆ ಪೂಜ್ಯರು ಕಲ್ಪಿಸಿಕೊಟ್ಟಿದ್ದಾರೆ. ಈ ಭಾಗದ ಲೇಖಕರು, ಚಿಂತಕರು ಈ ಪತ್ರಿಕೆಯಲ್ಲಿ ಲೇಖನ ಪ್ರಕಟ ಮಾಡಲಿ ಎಂಬುದು ಸಹ ಪೂಜ್ಯರ ಆಶಯವಾಗಿದೆ. ಸ್ಥಳೀಯತೆ, ಜಾನಪದ ವಿಷಯಗಳು ಪ್ರಕಟಗೊಳ್ಳುತ್ತವೆ. ಪೂಜ್ಯರ ಅಂತರದೃಷ್ಟಿ ವಿಷಯವು ಈ ಪತ್ರಿಕೆಯ ಮಹತ್ವದ ವಿಷಯವಾಗಿದೆ ಎಂದು ಹೇಳಿದರು.
ನಂತರ ಅಂತರವಾಣಿ ಎಂಬ ವಿಷಯದ ಮೇಲೆ ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿದ್ದಲಿಂಗಪ್ಪ ಕಣ್ಣಿ ಮಾತನಾಡಿ, ಶರಣಬಸವೇಶ್ವರ ಸಂಸ್ಥಾನದ ಪ್ರಸಾರ ಮಾಧ್ಯಮಗಳಲ್ಲಿ ಅಂತರವಾಣಿ ರೇಡಿಯೋ ಕೇಂದ್ರವು ಒಂದಾಗಿದೆ. 2009 ರಲ್ಲಿ ಅಂತರವಾಣಿ ಸಮುದಾಯ ರೇಡಿಯೋ ಕೇಂದ್ರವನ್ನು ಪೂಜ್ಯರು ಆರಂಭಿಸಿದರು. ಕಲ್ಯಾಣ ಕರ್ನಾಟಕದ ಏಕೈಕ ಸಮುದಾಯ ರೇಡಿಯೋ ಕೇಂದ್ರ ಎಂಬ ಹೆಗ್ಗಳಿಕೆ ಈ ಕೇಂದ್ರಕ್ಕಿದೆ. ಧ್ವನಿ ಇಲ್ಲದವರ ಧ್ವನಿಯಾಗಲಿ ಎಂಬ ಉದ್ದೇಶದಿಂದ ಪೂಜ್ಯರು ಈ ಕೇಂದ್ರವನ್ನು ಆರಂಭಿಸಿದರು. ಇದರಲ್ಲಿ ಧಾರ್ಮಿಕ, ಸಾಹಿತ್ಯ, ಶಿಕ್ಷಣ, ವಾಣಿಜ್ಯ, ವಿಜ್ಞಾನ, ಆರೋಗ್ಯ, ಜಾನಪದ ಹೀಗೆ ಹಲವಾರು ಉನ್ನತ ವಿಷಯಗಳ ಕಾರ್ಯಕ್ರಮಗಳು ಬಿತ್ತರವಾಗುತ್ತವೆ. ಸುಮಾರು 50 ಸಾವಿರ ಗಂಟೆಗಳ ಕಾರ್ಯಕ್ರಮಗಳನ್ನು ಈ ಕೇಂದ್ರ ಹೊಂದಿದೆ. ಪ್ರತಿಯೊಬ್ಬರಿಗೂ ರೇಡಿಯೋದಲ್ಲಿ ಮಾತನಾಡಲಿ ಎಂಬುದು ಪೂಜ್ಯ ಡಾ.ಅಪ್ಪ ಅವರ ಮತ್ತು ಪೂಜ್ಯ ಡಾ.ಅವ್ವರ ಕಾಳಜಿಯಾಗಿದೆ. ಹಲವಾರು ಪ್ರಶಸ್ತಿ ಪಡೆದ ಈ ಕೇಂದ್ರ ಇತ್ತೀಚಿಗೆ ಉತ್ತಮ ಕಾರ್ಯಕ್ರಮಗಳ ಕುರಿತಾಗಿ ಕೇಂದ್ರ ಸರಕಾರ ಕೊಡ ಮಾಡುವ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಅಂತರವಾಣಿ ರೇಡಿಯೋ ಕೇಂದ್ರ ಗಳಿಸಿಕೊಂಡು ಸಂಸ್ಥಾನಕ್ಕೆ ಹೆಮ್ಮೆಯ ಗರಿ ತಂದಿದೆ ಎಂದು ಹೇಳಿದರು.