ನದಿ ಸಿಣ್ಣೂರ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹ
ಕಲಬುರಗಿ,ಸೆ.1-ಅಫಜಲಪುರ ಮತಕ್ಷೇತ್ರದ ಸರಡಗಿ (ಬಿ) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನದಿ ಸಿಣ್ಣೂರ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಗ್ರಾಮ ಪಂಚಾಯತ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಧರ್ಮಣ್ಣಾ ಇಟಗಾ, ಗ್ರಾಮದ ಮುಖಂಡರಾದ ಮಲ್ಲಣ್ಣಗೌಡ ಮಾಲಿ ಪಾಟೀಲ, ಶರಣಯ್ಯ ಎಸ್.ಹಿರೇಮಠ, ಮಹ್ಮದ್ ಸಾಬ್ ಬುರಾನ್, ಅಬ್ದುಲ್ ರಜಾಕಸಾಬ್ ಇನಾಮದಾರ, ಸುಭಾಷ ಪೂಜಾರಿ ಒತ್ತಾಯಿಸಿದ್ದಾರೆ.
ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸಲು ಬೋರವೆಲ್ ಹಾಕದೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಡಿಎಂಎಫ್ ಯೋಜನೆ ಅಡಿಯಲ್ಲಿ ರೂ.27 ಲಕ್ಷ ವೆಚ್ಚದಲ್ಲಿ ಪೈಪ್‍ಲೈನ್ ಮಾಡಿ ಬಿಲ್ ಎತ್ತಿ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದರಿಂದಾಗಿ ಇದುವರೆಗೆ ಗ್ರಾಮಕ್ಕೆ ನೀರು ಸರಬರಾಜು ಆಗಿಲ್ಲ. ಹೀಗಾಗಿ ಗ್ರಾಮಸ್ಥರು ಭೀಮಾ ನದಿಯ ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ. ಈ ಸಂಬಂಧ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸ್ಥಳ ಪರಿಶೀಲಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದೂ ಇಲ್ಲಿಯವರೆಗೆ ಇದುವರೆಗೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ದೂರಿದ್ದಾರೆ.