ಮಂತ್ರಾಲಯ: 4ರಂದು ಲಕ್ಷ್ಮೀಶೋಭಾನ ಪಾರಾಯಣ
ಕಲಬುರಗಿ, ಸೆ.1- ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸೆಪ್ಟಂಬರ್ 4ರಂದು ಕುಂಕುಮಾರ್ಚನೆ ಸಹಿತ ಸಾಮೂಹಿಕ ಶ್ರೀ ಲಕ್ಷ್ಮಿ ಶೋಭಾನ ಪಾರಾಯಣ ಕಾರ್ಯಕ್ರಮ ಆಯೋಜಿಸಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ 12ನೇ ಚಾತುರ್ಮಾಸ್ಯ ಉತ್ಸವ ಪ್ರಯುಕ್ತ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀಗಳ ಆಜ್ಞಾನುಸಾರ, ಶ್ರೀಮಠದ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ಪ್ರಾಜೆಕ್ಟ್ ನ ಗೌರವ ನಿರ್ದೇಶಕರಾದ ಕೆ. ಅಪ್ಪಣ್ಣಾಚಾರ್ಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಕಲಬುರಗಿ ವಿಭಾಗದಿಂದ ಹತ್ತು ಮಹಿಳಾ ಭಜನಾ ಮಂಡಳಿಗಳನ್ನು ಆಯ್ಕೆ ಮಾಡಲಾಗಿದೆ. ಶ್ರೀ ವಿಷ್ಣುಪ್ರಿಯ, ಶ್ರೀ ಮೈತ್ರೇಯಿ, ಶ್ರೀ ಗುರುಸಾರ್ವಭೌಮ, ಶ್ರೀ ವೆಂಕಟೇಶ, ಶ್ರೀ ಲಕ್ಷ್ಮೀ, ಶ್ರೀ ಪ್ರಸನ್ನ ಮಾರುತಿ, ಶ್ರೀ ಜಯತೀರ್ಥ, ಶ್ರೀ ವೈಭವ ಲಕ್ಷ್ಮೀ, ಶ್ರೀ ಮಹಾಲಕ್ಷ್ಮೀ ಮತ್ತು ಶ್ರೀ ಗುರುದತ್ತ ಭಜನಾ ಮಂಡಳಿ ಸದಸ್ಯರು ಪಾರಾಯಣ ಮಾಡಲಿದ್ದಾರೆ ಎಂದು ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ಕಲಬುರಗಿ ವಿಭಾಗದ ಉಪ ನಿರ್ದೇಶಕರಾದ ಭೀಮಭಟ್ಟ ಬೆಂಕಿ ಮೋತಕಪಲ್ಲಿ ತಿಳಿಸಿದ್ದಾರೆ.