ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗೆ ಪೊಲೀಸರ ಗುಂಡೇಟು
ಕಲಬುರಗಿ,ಸೆ.1-ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಗರ ಹೊರವಲಯದ ಬೇಲೂರ್ ಕ್ರಾಸ್ ಬಳಿ ನಡೆದಿದೆ.
ಆರೋಪಿ ಅವತಾರಸಿಂಗ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಕಾಲಿಗೆ ಗುಂಡೇಟು ತಗುಲಿದೆ. ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ಅವತಾರಸಿಂಗ್‍ನನ್ನು ಮತ್ತು ಘಟನೆಯಲ್ಲಿ ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿಗಳಾದ ಭೀಮು ನಾಯಕ, ಮಂಜುನಾಥ ಮತ್ತು ಫಿರೋಜ್ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಢಾಭಾ ಡಕಾಯಿತಿ ಪ್ರಕರಣದಲ್ಲಿ ಆರೋಪಿ ಅವತಾರಸಿಂಗ್‍ನನ್ನು ಸಬ್-ಅರ್ಬನ್ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂತೋಷ ತಟ್ಟೆಪಲ್ಲಿ, ಸಿಬ್ಬಂದಿಗಳಾದ ಭೀಮು ನಾಯಕ, ಮಂಜುನಾಥ, ಫಿರೋಜ್ ಸೇರಿ ಮತ್ತಿತರರು ಬಂಧಿಸಲು ಹೋಗಿದ್ದರು. ಈ ವೇಳೆ ಆರೋಪಿ ಅವತಾರಸಿಂಗ್ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಇನ್ಸಪೆಕ್ಟರ್ ಸಂತೋಷ ತಟ್ಟೆಪಲ್ಲಿ ಅವರು ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಆರೋಪಿ ಕಾಲಿಗೆ ಗುಂಡೇಟು ತಗುಲಿ ಕುಸಿದು ಬಿದ್ದಿದ್ದರಿಂದ ಆತನನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.