ನಾಲವಾರ:ತೆರೆದ ಬಾವಿಯಂತಾದ ರಸ್ತೆ
ವಾಡಿ,ಸೆ.1-ಇಲ್ಲಿಗೆ ಸಮೀಪದ ನಾಲವಾರ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು, ಮಳೆಗಾಲದ ಸಂದರ್ಭದಲ್ಲಿ ತೆರೆದ ಬಾವಿಯಂತೆ ಭಾಸವಾಗುತ್ತಿದೆ. ಮಳೆ ಬಂದರೆ ಸಾಕು ರಸ್ತೆ ಮಧ್ಯದಲ್ಲಿ ಬಿದ್ದಿರುವ ತಗ್ಗುಗುಂಡಿಗಳಲ್ಲಿ ನೀರು ನಿಂತು ರಸ್ತೆ ಕಾಣದೇ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ನಾಲವಾರ ಒಂದು ಐತಿಹಾಸಿಕ ಗ್ರಾಮ. ಇಲ್ಲಿ ಐತಿಹಾಸಿಕ ಕೊರಿಸಿದ್ದೇಶ್ವರ ದೇವಸ್ಥಾನವಿದೆ. ತಾಲೂಕ ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್ ಕ್ಷೇತ್ರ ಇದೆ. ಗ್ರಾಮ ಪಂಚಾಯತ್ ಕಾರ್ಯಲಯ ಕೂಡ ಇಲ್ಲೆ ಇದೆ. ಅಲ್ಲದೆ ನಾಲವಾರ ಕಂದಾಯ ಹೂಬಳ್ಳಿ ಸಹಿತ ಇದೆ ನೇಮದಿ ಕೇಂದ್ರ ಸಹಿತ ಇಲ್ಲೆ ಇದೆ. ಇದು ರಾಜ್ಯದಲ್ಲಿ ದೊಡ್ಡ ಪಂಚಾಯತ್. ಆದರೆ ಇಲ್ಲಿನ ರಸ್ತೆಗಳು ನೋಡಿದರೆ ಚುನಾಯಿತ ಪ್ರತಿನಿಧಿಗಳು ಇದ್ದಾರೋ, ಇಲ್ಲವೋ ಎನ್ನುವ ಅನುಮಾನ ಕಾಡುತ್ತದೆ. ಈ ಪರಿ ರಸ್ತೆ ಹದಗೆಟ್ಟು ಹೋಗಿದ್ದರೂ ಯಾರೂ ಸಹ ರಸ್ತೆ ದುರಸ್ತಿಯ ಬಗ್ಗೆ ಮುತುವರ್ಜಿ ವಹಿಸುತ್ತಿಲ್ಲ ಎಂಬುದು ನಿತ್ಯ ಈ ರಸ್ತೆಯಲ್ಲಿ ಓಡಾಡುವ ಜನರ ಆಕ್ರೋಶವಾಗಿದೆ. ಸಂಬಂಧಪಟ್ಟವರು ಇನ್ನು ಮುಂದಾದರು ರಸ್ತೆ ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕಿದೆ.