ಸರ್ಕಾರಿ ಜಾಗೆ ಒತ್ತುವರಿ ತಡೆಗೆ ಪೊಲೀಸ್ ಬೀಟ್ ಮಾದರಿ ಲ್ಯಾಂಡ್ ಬೀಟ್ ವ್ಯವಸ್ಥೆ
ವಿಜಯಪುರ,ಸೆ.1 :ಸರ್ಕಾರಿ ಜಾಗೆÀ ಒತ್ತುವರಿ ತಡೆಗೆ ಪೊಲೀಸ್ ಬೀಟ್ ಮಾದರಿಯಲ್ಲಿ ಲ್ಯಾಂಡ್ ಬೀಟ್ ವ್ಯವಸ್ಥೆ ಕೈಗೊಂಡು ಒತ್ತುವರಿ, ಅತಿಕ್ರಮಣ ತಡೆಗಟ್ಟಲು ಕ್ರಮ ವಹಿಸುವಂತೆ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ (ಇ-ಆಡಳಿತ) ಸರ್ಕಾರದ ಕಾರ್ಯದರ್ಶಿ, ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್ ಕುಮಾರ ಘೋಷ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿಕೊಳ್ಳಬೇಕು. ಒತ್ತುವರಿಯಾಗಬಹುದಾದ ಜಾಗಗಳನ್ನು ಆದ್ಯತೆ ಮೇಲೆ ಪರಿಶೀಲಿಸಿ ಒತ್ತುವರಿಯಾಗದಂತೆ ನಿಗಾ ವಹಿಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಜಾಗದ ಕುರಿತು ಇರುವ ಅನುದಾನವನ್ನು ಬಳಕೆ ಮಾಡಿಕೊಂಡು ಸುತ್ತಲೂ ತಂತಿ ಬೇಲಿ ವ್ಯವಸ್ಥೆ ಸೇರಿದಂತೆ ಸರ್ಕಾರಿ ಜಾಗ ಇರುವ ಕುರಿತು ಫಲಕಗಳನ್ನು ಅಳವಡಿಸುವ ಮೂಲಕ ಒತ್ತುವರಿ ತಡೆಗೆ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಸರ್ಕಾರಿ ಜಾಗ ಸೇರಿದಂತೆ ಇತರೆ ಸರ್ವೇ ಕಾರ್ಯಕ್ಕಾಗಿ ಈಗಿರುವ ಸಾಧನ ಹಳೆಯದಾಗಿರುವುದರಿಂದ ಪ್ರಸ್ತುತ ಕಾಲೋಚಿತ ಡಿಜಿಪಿಎಸ್ ಯಂತ್ರ ಬಳಸಿ ಸರ್ವೇ ಕಾರ್ಯ ಕೈಗೊಳ್ಳುವುದರಿಂದ ಸಮಯಕ್ಕೆ ತಕ್ಕಂತೆ ಕಾರ್ಯದಲ್ಲಿ ವೇಗ ದೊರೆಯಲಿರುವುದರಿಂದ ಡಿಜಿಪಿಎಸ್ ಯಂತ್ರಗಳನ್ನು ಒದಗಿಸುವ ಕುರಿತಂತೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಜನವರಿ ತಿಂಗಳಿಂದ ಈವರೆಗೆ 431 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಮಳೆಯ ಪ್ರಮಾಣಕ್ಕಿಂತ ಶೇ.44ರಷ್ಟು ಹೆಚ್ಚಿನ ಮಳೆಯಾಗಿದೆ. 7,11,370 ಹೆಕ್ಟೇರ್ ಮುಂಗಾರು ಬಿತ್ತನೆ ಕ್ಷೇತ್ರದಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಸಜ್ಜೆ, ಮುಸುಕಿನ ಜೋಳ ಹತ್ತಿ, ಸೂರ್ಯಕಾಂತಿ ಹಾಗೂ ಕಬ್ಬು ಬೆಳೆಯಲಾಗಿದ್ದು, ಇಲ್ಲಿಯವರೆಗೆ 6,76,433 ಹೆಕ್ಟೇರ್‍ಗಳಲ್ಲಿ ಶೇ.95.10 ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಬೀಜ 1462.45 ಕ್ವಿಂಟಲ್ ಹಾಗೂ 80882 ಮೇ.ಟನ್ ರಸಗೊಬ್ಬರ ದಾಸ್ತಾನಿದ್ದು, ಸದ್ಯಕ್ಕೆ ಯಾವುದೇ ಕೊರತೆ ಇಲ್ಲ. ಆದಾಗ್ಯೂ ಮುಂದಿನ ದಿನಗಳಲ್ಲಿ ಯಾವುದೇ ಕೊರತೆಯಾಗದಂತೆ ಅಗತ್ಯ ದಾಸ್ತಾನು ಮಾಡಿಕೊಳ್ಳುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಲಾಯಿತು.
ಜಿಲ್ಲೆಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ, ನಗರಾಭಿವೃದ್ದಿ ಕೋಶ ಸೇರಿದಂತೆ ಇತರೆ ಕಚೇರಿಗಳಲ್ಲಿ ಮಾತ್ರ ಅನುಷ್ಠಾನಗೊಳಿಸಲಾಗಿದ್ದು, ಎಲ್ಲ ಕಚೇರಿಗಲ್ಲಿ ಇ-ಆಫೀಸ್ ಅನುಷ್ಠಾನಗೊಳಿಸಬೇಕು. ಜಿಲ್ಲಾ ಆಸ್ಪತ್ರೆಗಳಲ್ಲೂ ಇ-ಆಫೀಸ್ ಅನುಷ್ಠಾನಗೊಳಿಸಬೇಕು. ಈ ಕುರಿತು ಅಗತ್ಯ ತರಬೇತಿ ಒದಗಿಸಿ ಮುಂದಿನ ಸಭೆಯೊಳಗಾಗಿ ಎಲ್ಲ ಕಚೇರಿಗಳಲ್ಲಿ ಇ-ಆಫೀಸ್ ವ್ಯವಸ್ಥೆ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಸತಿ ನಿಲಯಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ವಹಿಸಬೇಕು. ಬಾಲಕಿಯರ ವಸತಿ ನಿಲಯಗಳಲ್ಲಿ ಸೂಕ್ತ ಸುರಕ್ಷತಾ ವ್ಯವಸ್ಥೆಗೆ ಪೊಲೀಸ್ ಬೀಟ್ ವ್ಯವಸ್ಥೆ ಕೈಗೊಳ್ಳಬೇಕು. ಹೊರಗಿನ ಯಾವುದೇ ಅನಧಿಕೃತ ವ್ಯಕ್ತಿಗಳು ವಸತಿ ನಿಲಯಗಳಲ್ಲಿ ಪ್ರವೇಶ ನಿರ್ಬಂಧಿಸಬೇಕು. ಅಂತಹ ಯಾವುದೇ ಅನಧಿಕೃತ ವ್ಯಕ್ತಿಗಳು ವಸತಿ ನಿಲಯಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಅಳವಡಿಸಲು ಕ್ರಮ ವಹಿಸಬೇಕು. ವಸತಿ ನಿಲಯದಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಕಾಲ-ಕಾಲಕ್ಕೆ ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಬೇಕು. ವಸತಿ ನಿಲಯಗಳಲ್ಲಿನ ನ್ಯೂನ್ಯತೆಗಳನ್ನು ಕಂಡು ಹಿಡಿದು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು. ವಸತಿ ನಿಲಯಗಳಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳು-ನ್ಯೂನ್ಯತೆಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿವಿಧ ವಸತಿ ನಿಲಯಗಳ ದುರಸ್ತಿಗಾಗಿ ಮಂಜೂರಾಗಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಂಡು ದುರಸ್ತಿ ಕಾರ್ಯ ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 7 ವಸತಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದ್ವಿಗುಣವಾಗಿರುವುದರಿಂದ ಶಿಕ್ಷಕರ ವಸತಿಗಳನ್ನು ಮಕ್ಕಳಿಗೆ ಒದಗಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಕಟ್ಟಡ ಅವಶ್ಯಕತೆ ಪರ್ಯಾಯ ವ್ಯವಸ್ಥೆ ಕುರಿತು ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಸೂಚನೆ ನಿಡಿದರು.
ಜಿಲ್ಲೆಯಲ್ಲಿರುವ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆ ಕಾರ್ಯ ಕೈಗೊಳ್ಳಬೇಕು. ಸರ್ಕಾರಿ ನೌಕರರು ಪಡೆದುಕೊಂಡಿರುವ ಬಿಪಿಎಲ್ ಕಾರ್ಡ್‍ಗಳನ್ನು ಹಿಂಪಡೆದು, ಎಪಿಎಲ್ ಕಾಡ್ರ್À ಮಾರ್ಪಾಡು ಮಾಡಿ ಒದಗಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.
ಆಹಾರ ಇಲಾಖೆ ಉಪನಿರ್ದೇಶಕರು ಈ ಕುರಿತು ಮಾಹಿತಿ ಒದಗಿಸಿ ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 4.43 ಲಕ್ಷ ಬಿಪಿಎಲ್ ಪಡಿತರದಾರರಿಗೆ ಡಿಬಿಟಿ ಮೂಲಕ ಹಣ ಜಮೆ ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ ಪಡೆದುಕೊಂಡ ಸರ್ಕಾರಿ ನೌಕರರಿಗೆ ದಂಡ ವಿಧಿಸಿ ಬಿಪಿಎಲ್ ಕಾಡ್ರ್Àಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಲ್ಲ ಡ್ಯಾಂಗಳು ಭರ್ತಿಯಾಗಿವೆ. ಜಿಲ್ಲೆಯ ಡ್ಯಾಂಗಳಲ್ಲಿ ಶೇ.93.5 ರಷ್ಟು ನೀರು ಸಂಗ್ರಹವಿದೆ. ವಿಪತ್ತು ನಿರ್ವಹಣೆಗಾಗಿ ಗ್ರಾಮ ಪಂಚಾಯತ್ ಟಾಸ್ಕ್ ಪೋರ್ಸ್ ಸಮಿತಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಪ್ರವಾಹ ಪರಿಸ್ಥಿತಿ ಹತೋಟಿಗೆ ಕ್ರಮ ವಹಿಸಲಾಗಿದೆ. ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗೆ ಅಗತ್ಯವಾದ ಎಲ್ಲ ರಕ್ಷಣಾ ಸಾಮಗ್ರಿಗಳಾದ ಬೋಟ್, ರೋಪ್ಸ್, ಲೈಫ್ ಜಾಕೆಟ್, ಈಜುಗಾರ, ಟಾರ್ಚ್ ಹಾಗೂ ಚೈನ್ ಇತ್ಯಾದಿ ತಾಲೂಕಾ ಹಾಗೂ ಜಿಲ್ಲಾ ಮಟ್ಟದಲ್ಲಿ ವ್ಯವಸ್ಥಿತವಾಗಿಟ್ಟುಕೊಳ್ಳಲಾಗಿದೆ. ಪ್ರವಾಹ ಪರಿಸ್ಥಿತಿ ಕುರಿತು ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಮತ್ತು ನದಿ ಪಾತ್ರದ ಗ್ರಾಮ ಪಂಚಾಯತಿಗಳಿಗೆ ಒಬ್ಬರಂತೆ ತಾಲೂಕಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ 7 ಜನರ ಪ್ರಾಣ ಹಾನಿಗೆ ಸಂಬಂಧಿಸಿದಂತೆ 95 ಜಾನುವಾರುಗಳಿಗೆ ಹಾಗೂ ಹಾನಿಯಾದ 276 ಮನೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವ ನಿಧಿ ಹಾಗೂ ಶಕ್ತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.