ಮೀಟರ್ ಬಡ್ಡಿ ದಂಧೆಗೆ ಮತ್ತೆ ಶಾಕ್!23 ಬಂಧನ- 16 ಪ್ರಕರಣ ದಾಖಲು
ಹುಬ್ಬಳ್ಳಿ, ಸೆ 1: ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರಿಗೆ ಮತ್ತೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದ್ದು, ಮೀಟರ್ ಬಡ್ಡಿ ದಂಧೆ ನಡೆಸುವ 23 ಜನರನ್ನು ಬಂಧಿಸಿ, 16 ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ಕ್ರಮ ಕೈಕೊಳ್ಳಲಾಗಿದೆ.
ಇಂದಿಲ್ಲಿ ಹು-ಧಾ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ಆರೋಪಿಗಳಾದ ರಾಜೇಶ ಮೆಹರವಾಡೆ, ಮೋಹಿತ್ ಮೆಹರವಾಡೆ, ಅನಿತಾ ಹಬೀಬ, ದೀಪಾ ಕೆಲವಡಿ ಅವರುಗಳ ವಿರುದ್ಧ ಪ್ರಕರಣಗಳು, ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಸತೀಶ ದೊಡಮನಿ, ಕಮರಿಪೇಟ್ ಠಾಣೆ ವ್ಯಾಪ್ತಿಯಲ್ಲಿ ಧನಲಕ್ಷ್ಮಿ ಮದ್ರಾಸಿ, ಗೋಕುಲರೋಡ್ ಠಾಣೆ ವ್ಯಾಪ್ತಿಯಲ್ಲಿ ಸೋಲೋಮನ್ ಬಬ್ಬಾ, ಆನಂದ ರಾಯಚೂರ, ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ನವೀನ್ ಭಾಂಡಗೆ, ದತ್ತು ಪಟ್ಟನ್, ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ ಶೇಖವ್ವ ದಾಸನೂರ, ಕೇಶ್ವಾಪೂರ ಠಾಣೆ ವ್ಯಾಪ್ತಿಯಲ್ಲಿ ಸ್ಟೀಫನ್ ಕ್ಷೀರಸಾಗರ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಮೀರ್, ಸಯ್ಯದಲಿ, ಬಿ.ಕೆ. ಬಾಯಿ, ಹ್ಯಾರಿಶ್ ಪಠಾಣ, ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಜಾವೇದ್ ಘೋಡೆಸವಾರ್, ಧಾರವಾಡ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಕೀರ ಕರಡಿಗುಡ್ಡ ವಿರುದ್ಧ ಪ್ರಕರಣ ದಾಖಲಾಗಿವೆ.
ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಗಿರಿಯಪ್ಪ ಬಳ್ಳಾರಿ, ಬಾಲು ಬಳ್ಳಾರಿ, ಅಭಿಲೇಖಾ ತೋಖಾ, ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ತನ್ವೀರ್ ಜಂಗ್ಲೀವಾಲೆ, ಹಳೇ-ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಾರಾಯಣ ಕಾಟಿಗಾರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದರು.
ಆರೋಪಿತರಿಂದ ಅಂದಾಜು ನಾಲ್ಕು ಲಕ್ಷರೂ. ಮೌಲ್ಯದ ಬೆಳ್ಳಿ ಚೈನ್, ಬೈಕ್‍ಗಳು, ಖಾಲಿ ಚೆಕ್‍ಗಳು, ಬಾಂಡ್ ಪೇಪರ್‍ಗಳು, ಮೊಬೈಲ್ ಫೋನ್‍ಗಳು, ವಾಹನದ ಮೂಲದಾಖಲಾತಿಗಳು ಇತ್ಯಾದಿ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಡಿ.ಸಿ.ಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ್ ನಾಯಕ್, ಉಮೇಶ್ ಚಿಕ್ಕಮಠ ಹಾಗೂ ವಿವಿಧ ಠಾಣೆಗಳ ಸಿಪಿಐ ಸಿಬ್ಬಂದಿ ಉಪಸ್ಥಿತರಿದ್ದರು.
ಬಡ್ಡಿ ಕುಳಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ:
ಈ ಹಿಂದೆಯೂ ಇಂಥ ಪ್ರಕರಣಗಳಲ್ಲಿ 25 ಬಡ್ಡಿ ದಂಧೇಕೋರರನ್ನು ಬಂಧಿಸಲಾಗಿತ್ತು. ಸಾರ್ವಜನಿಕರಿಗೆ ಬಡ್ಡಿ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಕೊಳ್ಳಲಾಗುವದು ಎಂದಿರುವ ಪೊಲೀಸ್ ಆಯುಕ್ತರು, ಬಡ್ಡಿ ಕುಳಗಳ ಮೇಲೆ ನೊಂದವರು ದೂರು ನೀಡಿದರೆ ಕಟ್ಟುನಿಟ್ಟಿನ ಕ್ರಮ ಕೈಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.