ಅಂತಾರಾಜ್ಯ ಹೊನಲು ಬೆಳಕಿನ ಮಹಿಳಾ ಮುಕ್ತ ಕಬಡ್ಡಿ ಪಂದ್ಯಾವಳಿ: ಮುಂಬೈ ತಂಡಕ್ಕೆ ಚಾಂಪಿಯನ್ ಪಟ್ಟ
ವಿಜಯಪುರ,ಸೆ.1:ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶನಾಲಯ, ಹಾಗೂ ದೈಹಿಕ ಶಿಕ್ಷಣ ಅಧ್ಯಯನ ವಿಭಾಗ, ದೈಹಿಕ ಶಿಕ್ಷಣ ನಿರ್ದೇಶಕರು ಸಂಘ ಮತ್ತು ವಿಜಯಪುರ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಇವುಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಳಾ ಕಬಡ್ಡಿ ವೈಭವ-2024’ ಅಂತಾರಾಜ್ಯ ಹೊನಲು ಬೆಳಕಿನ ಮಹಿಳಾ ಮುಕ್ತ ಕಬಡ್ಡಿ ಪಂದ್ಯಾವಳಿಯ ಫೈನಲ್‍ನಲ್ಲಿ ಅಕ್ಷರಶಃ ಅಧಿಕಾರಯುತ ಆಟವಾಡಿದ ಮುಂಬೈ ತಂಡ ಸಂಪೂರ್ಣ ಪ್ರಾಬಲ್ಯ ಮೆರೆದು ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಗಸ್ಟ್ 30 ರಂದು ನಡೆದ ಫೈನಲ್‍ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿದ ಆಲ್‍ರೌಂಡರ್ ಹರ್ಷ ಶೆಟ್ಟಿ ಸಾರಥ್ಯದ ಮುಂಬೈ ತಂಡ 35-15 ಭಾರಿ ಅಂತರದ ಅಂಕಗಳಿಂದ ತನ್ನ ಎದುರಾಳಿ ತಂಡವಾದ ವಿಜಯ ವಾರಿಯರ್ಸ್‍ನ್ನು ಬಗ್ಗು ಬಡಿದು ಟ್ರೋಪಿ ಮುಡಿಗೇರಿಸಿಕೊಂಡಿದೆ.
ಈ ಟೂರ್ನಾಮೆಂಟ್‍ನ ಎಲ್ಲಾ ಪಂದ್ಯಗಳನ್ನು ಗೆದ್ದ ಮುಂಬೈ ತಂಡ, ಚಾಂಪಿಯನ್‍ಶಿಪ್ ಪಟ್ಟವನ್ನು ಅಲಂಕರಿಸಿರುವುದು ಕಬಡ್ಡಿ ಕ್ರೀಡೆಯಲ್ಲಿ ಆ ತಂಡಕ್ಕಿದ್ದ ತಂತ್ರಗಾರಿಕೆ, ಚಾಕಚಕ್ಯತೆ ಹಾಗೂ ಅನುಭವಕ್ಕೆ ಹಿಡಿದ ಕೈಗನ್ನಡಿ ಆಗಿದೆ. ಒಟ್ಟು 17 ತಂಡಗಳು ಭಾಗವಹಿಸಿದ್ದ ಟೂರ್ನಾಮೆಂಟ್‍ನಲ್ಲಿ ಮುಂಬೈ, ಕೊಲ್ಹಾಪುರ, ಹರಿಯಾಣ, ವಿಜಯಪುರ, ಬೆಳಗಾವಿ, ಗದಗ, ಮೈಸೂರು, ಹಾವೇರಿ ತಂಡಗಳು ಪಾಲ್ಗೊಂಡಿದ್ದವು. ರನ್ನರ್‍ಅಪ್ (ದ್ವಿತೀಯ ಸ್ಥಾನ) ಸ್ಥಾನಕ್ಕೆ ವಿಜಯ ವಾರಿಯರ್ಸ್ ತಂಡ ತೃಪ್ತಿ ಪಡೆದುಕೊಂಡರೆ, ತೃತೀಯ ಸ್ಥಾನವನ್ನು ಎ.ಆರ್ ಪಾಟೀಲ್ ವುಮೆನ್ಸ್ ಕಾಲೇಜ್ ಕೆ.ಎಸ್.ಎ.ಡಬ್ಲ್ಯು ವಿಜಯಪುರ ತಂಡ ಅಲಂಕರಿಸಿತು. ನಾಲ್ಕನೇ ಸ್ಥಾನವನ್ನು ಹ್ಯಾಪಿ ಗಲ್ರ್ಸ್ ಮೈಸೂರು ತಂಡ ಪಡೆಯಿತು.
ಸೈಮಿಫನಲ್‍ನ ಮೊದಲನೇ ಸುತ್ತಿನ 44-43 ರೋಚಕ ಅಂಕಗಳಿಂದ ಆರ್‍ಬಿಎಸ್‍ಸಿ ಮುಂಬೈ ತಂಡ ಎ.ಆರ್ ಪಾಟೀಲ್ ವುಮೆನ್ಸ್‍ಕಾಲೇಜ್ ಕೆ.ಎಸ್.ಎ.ಡಬ್ಲ್ಯು ವಿಜಯಪುರವನ್ನು ಬಗ್ಗು ಬಡಿದು ಫೈನಲ್ ತಲುಪಿತು. ಎರಡನೇ ಸುತ್ತಿನ ಸೆಮಿಫೈನಲ್ಲಿ 26-25 ಅಂತರದಿಂದ ಹ್ಯಾಪಿ ಗಲ್ರ್ಸ್ ಮೈಸೂರು ತಂಡ ವಿಜಯ ವಾರಿಯರ್ಸ್ ತಂಡದ ಎದುರು ಮಂಡಿಯೂರಿತು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ ತುಳಸಿಮಾಲ ಹಾಗೂ ಗಣ್ಯರು ಕಬಡ್ಡಿ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟು ಶರಣಬಸಪ್ಪ ಅರಕೇರಿ, ಜಿಲ್ಲಾ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ರಮೇಶ ಪಾಟೀಲ, ವಿವಿಯ ದೈಹಿಕ ಶಿಕ್ಷಣ ನಿರ್ದೇಶಕರ ಸಂಘದ ಅಧ್ಯಕ್ಷ ಶಿವಯೋಗಿ ಎಲಿ, ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ.ಸಕ್ಪಾಲ್ ಹೂವಣ್ಣ, ರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ವಿವಿಧ ರಾಜ್ಯಗಳ ಕಬಡ್ಡಿ ತಂಡ, ನಗರದ ವಿವಿಧ ಕಾಲೇಜಿನ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕರು, ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ರಾಜಕುಮಾರ ಮಾಲಿ ಪಾಟೀಲ ಸ್ವಾಗತಿಸಿದರು. ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಷ್ಣು ಶಿಂದೆ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.