ಮಕ್ಕಳ ನಾಯಕತ್ವ ಬೆಳವಣಿಗೆಗೆ ಕ್ರೀಡೆ ಸಹಾಯಕ : ಸುರೇಶ ಶೇಡಶ್ಯಾಳ
ವಿಜಯಪುರ,ಸೆ.1:ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಅತ್ಯಂತ ಸಹಾಯಕಾರಿಯಾಗಿದೆ. ಮಕ್ಕಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಅವರಲ್ಲಿ ನಾಯಕತ್ವದ ಗುಣಗಳು ಬೆಳೆಯುತ್ತವೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷÀ ಸುರೇಶ ಶೇಡಶ್ಯಾಳ ಹೇಳಿದರು.
ವಿಜಯಪುರ ನಗರದ ಅಂಬೇಡ್ಕರ ಕ್ರೀಡಾಂಗಣದಲ್ಲಿ ವಿಜಯಪುರದ ಸಕಾಫರೋಜಾ ಬಡಾವಣೆಯಲ್ಲಿನ ಸರಕಾರಿ ಉರ್ದು ಮಾದರಿ ಹೆಣ್ಣು ಮಕ್ಕಳ ಶಾಲೆ ನಂ.4ರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮನಗೂಳಿ ಅಗಸಿ ಎ ವಲಯದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕ್ರೀಡೆ ಮಕ್ಕಳಿಗೆ ಹೊಸ ಶಕ್ತಿ, ಚೈತನ್ಯ ಕೊಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಘಟಕದ ಖಜಾಂಚಿ ಜುಬೇರ ಕೆರೂರ ಮಾತನಾಡಿ, ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಸರ್ವಾಂಗೀಣ ಬೆಳವಣಿಗೆಯಾಗುತ್ತದೆ. ಸೋಲು ಗೆಲವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಕಾರ್ಯದರ್ಶಿ ರಾಜಶೇಖರ ದೈವಾಡಿ ಮಾತನಾಡಿ, ಕ್ರೀಡೆಗಳು ಮಕ್ಕಳಲ್ಲಿ ಮನೋಲ್ಲಾಸವನ್ನುಂಟು ಮಾಡುತ್ತವೆ. ಕ್ರೀಡೆಗಳು ಹೋರಾಟದ ಮನೋಭಾವನೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಲಾಹೋರಿ ಹಾಗೂ ದೈಹಿಕ ಶಿಕ್ಷಣಾಧಿಕಾರಿ ಬಿರಾದಾರ ಅವರು ಕ್ರೀಡಾಜ್ಯೋತಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಕ್ಕಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಎಸ್.ಎನ್. ಪಡಶೆಟ್ಟಿ, ಅಜೀಜ ಅರಳಿಮಟ್ಟಿ, ಬಸೀರ ನದಾಫ ಹಾಗೂ ದೈಹಿಕ ಶಿಕ್ಷಕರು, ಶಿಕ್ಷಕಿಯರು ಕ್ರೀಡಾಪಟುಗಳು ಭಾಗವಹಿಸಿದ್ದರು. ವಿಜೇತ ಮಕ್ಕಳಿಗೆ ಪಾರಿತೋಷಕ, ಮೆಡಲ್ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು.