ಬುದ್ದಿಮಾಂದ್ಯಳ  “ರೇಪ್ ಅಂಡ್ ಮರ್ಡರ್ “
ಸಂಜೆವಾಣಿ ವಾರ್ತೆ  
ಕೂಡ್ಲಿಗಿ. ಸೆ. 1 :- ತಾಲೂಕಿನ ಗಡಿಗ್ರಾಮ ತಿಪ್ಪೆಹಳ್ಳಿ ಗ್ರಾಮದ ಹತ್ತಿರದ ಜಿನಿಗಿ ಹಳ್ಳದ ಬಳಿ ಇರುವ ವಾಟರ್ ಪಂಪ್ ಹೌಸ್ ಬಳಿ ಮಹಿಳೆಯೋರ್ವಳ  ಶವವೊಂದು ಪತ್ತೆಯಾಗಿದ್ದು  ಈಕೆ ಬುದ್ದಿಮಾಂದ್ಯೆ ಮಹಿಳೆ ಎಂದು ಹೇಳಲಾಗುತ್ತಿದ್ದೂ ರೇಪ್ ಅಂಡ್ ಮರ್ಡರ್ ಆಗಿರುವ ಶಂಕೆ ವ್ಯಕ್ತವಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಅಬ್ಬೆನಹಳ್ಳಿ ಗ್ರಾಮದ ಬುದ್ದಿಮಾಂದ್ಯ ಮಹಿಳೆ ನೇತ್ರಮ್ಮ (30) ಕೊಲೆಯಾಗಿರುವ ಮಹಿಳೆ ಎಂದು ಹೇಳಲಾಗುತ್ತಿದ್ದೂ  ಈ ಘಟನೆ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನ ಮಧ್ಯಾವಧಿಯಲ್ಲಿ ಜರುಗಿದೆ ಎಂದು ತಿಳಿದಿದೆ.
ಘಟನೆ ವಿವರ : ಪ್ರಕರಣದ ದೂರು ನೀಡಿದ ದುರುಗಮ್ಮಳ ಹೇಳಿಕೆಯಂತೆ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ  ನೇತ್ರಮ್ಮ ಮನೆಯಿಂದ ಹೊರಗಡೆ ಹೋಗಿದ್ದಳು, ಬಹಿರ್ದೆಶೆಗೆ ಹೋಗಿದ್ದ ನನ್ನ ಮಗಳು ಲಕ್ಷ್ಮಿ ಸಂಜೆ 6-45 ಗಂಟೆ ಸುಮಾರಿಗೆ ನಮ್ಮ ಮನೆಗೆ ಬಂದು ಸಂಜೆ 6-30 ಗಂಟೆ ಸುಮಾರಿಗೆ ನೇತ್ರಮ್ಮ ಮತ್ತು ಅದೇ ಗ್ರಾಮದ ಕಾಕಯ್ಯ ಇಬ್ಬರೂ ನಮ್ಮೂರು ಅಬ್ಬೇನಹಳ್ಳಿಯಿಂದ ತಿಪ್ಪೇಹಳ್ಳಿ  ಗ್ರಾಮದ ಕಡೆಗೆ ನಡೆದುಕೊಂಡು ಹೋದರು ಎಂದು ತಿಳಿಸಿದಳು.
ನನ್ನ ತಂಗಿ ನೇತ್ರಮ್ಮಳು ರಾತ್ರಿಯಾದರು ಮನೆಗೆ ಬಾರದೇ ಇದ್ದುದರಿಂದ ನಾವು ನಮ್ಮ ತಂಗಿ ನೇತ್ರಮ್ಮಳನ್ನು ಗ್ರಾಮದಲ್ಲಿ ಹುಡುಕಾಡಲಾಗಿ ಸಿಗಲಿಲ್ಲ ಆಗಾಗ ಲೇಟಾಗಿ ಮನೆಗೆ ಬರುತ್ತಿದ್ದರಿಂದ ಆಮೇಲೆ  ಬರುತ್ತಾಳೆಂದು ತಿಳಿದು ಸುಮ್ಮನಾಗಿದ್ದೆವು. ಆದರೆ ಶನಿವಾರ ಬೆಳಿಗ್ಗೆ ವಿಷಯ ತಿಳಿದು ಹೋಗಿ ನೋಡಲಾಗಿ  ನೇತ್ರಮ್ಮಳು ಪಂಪ್ ಹೌಸ್ ಹತ್ತಿರ ಮೈಮೇಲೆ ಬಟ್ಟೆಗಳಿಲ್ಲದೆ  ಬೋರಲಾಗಿ ಬಿದ್ದಿದ್ದು, ತಲೆಗೆ, ಮುಖಕ್ಕೆ ರಕ್ತಗಾಯವಾಗಿ.
ಸ್ಥಳದಲ್ಲೇ ಮೃತಪಟ್ಟಿದ್ದಳು. ಇದರಿಂದಾಗಿ   ನೇತ್ರಮ್ಮಳನ್ನು ಯಾರೋ ರೇಪ್ ಮಾಡಿ. ಕಲ್ಲಿನಿಂದ ತಲೆಗೆ, ಮುಖಕ್ಕೆ ಜಜ್ಜಿ ಕೊಲೆ ಮಾಡಿ ಹೋಗಿರುತ್ತಾರೆಂದು ಶಂಕೆ ವ್ಯಕ್ತಪಡಿಸಿದ ಸಹೋದರಿ ದುರುಗಮ್ಮ ಕಾನಾ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಂತೆ  ನನ್ನ ತಂಗಿಯೊಂದಿಗೆ ಬಂದ ನಮ್ಮ ಗ್ರಾಮದ ಕಾಕಯ್ಯ  ಎಂಬುವರ ಮೇಲೆ ಕೊಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದು ಪ್ರಕರಣ ಶನಿವಾರ ಮಧ್ಯಾಹ್ನ  ದಾಖಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ : ಮಹಿಳೆಯೋರ್ವಳ ಕೊಲೆ ನಡೆದಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಅಧೀಕ್ಷಕ ಶ್ರೀಹರಿಬಾಬು, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಕೊಟ್ಟೂರು ಸಿಪಿಐ ವೆಂಕಟಾಸ್ವಾಮಿ ಹಾಗೂ ಹೊಸಹಳ್ಳಿ ಪಿಎಸ್ಐ ಸಿದ್ರಾಮಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಾದಂತೆ ಮುಂದಿನ ತನಿಖಾ ಕಾರ್ಯ ಕೈಗೊಂಡಿದ್ದಾರೆ.