ಕೊಟ್ಟೂರು ಪಪಂ ಅಧ್ಯಕ್ಷರಾಗಿ ಕಾಂಗ್ರೇಸ್ ಬಿ.ರೇಖಾ, ಉಪಾಧ್ಯಕ್ಷರಾಗಿ ಬಿಜೆಪಿ ಸಿದ್ದಯ್ಯ ಅವಿರೋಧ ಆಯ್ಕೆ
ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.01: ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ರಾಜ್ಯದಲ್ಲಿ ಬಿಜೆಪಿ ನಾನಾ ರೀತಿಯ ಕಸರತ್ತು ನಡೆಸುತ್ತಿದೆ ಆದರೆ ಕೊಟ್ಟೂರು ಪಟ್ಟಣ ಪಂಚಾಯತಿ  ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆಯಿಂದ ಆಡಳಿತ ಚುಕ್ಕಾಣಿ ಹಿಡಿದಿದೆ.
ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿ. ಸಮುದಾಯದ ಕಾಂಗ್ರೇಸ್‌ನ ಬಿ. ರೇಖಾ, ಉಪಾದ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಬಿಜೆಪಿಯ ಸಿದ್ದಯ್ಯ ನಾಮಪತ್ರ ಸಲ್ಲಿಸಿದ್ದು, ಬೇರೆ ಯಾವ ಸದಸ್ಯರು ನಾಮ ಪತ್ರ ಸಲ್ಲಿಸದ ಕಾರಣ ಚುಣಾವಣಾ ಅಧಿಕಾರಿಯಾಗಿದ್ದ ಜಿ.ಕೆ. ಅಮರೇಶ ಇವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಪಟ್ಟಣ ಪಂಚಾಯಿತಿಯ ಒಟ್ಟು 2೦ ಸದಸ್ಯರಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕರು ಸೇರಿ ಒಟ್ಟು 16 ಸದಸ್ಯರು ಆಯ್ಕೆಯ ಸಭೆಗೆ ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ. ರೇಖಾ ಅವರಿಗೆ ಬಿ.ಕೆ. ಸಾವಿತ್ರಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸಿದ್ದ ಜಿ. ಸಿದ್ದಯ್ಯ ಅವರಿಗೆ ಕೆ.ಎಸ್. ಈಶ್ವರಗೌಡ ಸೂಚಿಸಿದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಕೆ.ಹನುಮವ್ವ ಜೆಡಿಎಸ್ ನ ಶಾಸಕ ಕೆ.ನೇಮಿರಾಜ್ ನಾಯ್ಕ್ ರೊಂದಿಗೆ ಗುರುತಿಸಿಕೊಂಡಿದ್ದರು, ಹಾಲಿ ಶಾಸಕರಾಗಿ ತಮ್ಮ ಪ್ರಭಾವ ಬಳಸಿ ತಮ್ಮ ಪರ ಇದ್ದ ಆಕಾಂಕ್ಷಿಯನ್ನು ಗೆಲ್ಲಿಸಲು ಆಸಕ್ತಿ ತೋರಬಹುದಿತ್ತು ಎಂಬ ಮಾತುಗಳು ಕೇಳಿ ಬಂದವು. 
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ  ಮಾಜಿ ಶಾಸಕ ಹಾಲಿ ಕೆಎಂಎಫ್ ಅಧ್ಯಕ್ಷ    ಭೀಮಾನಾಯ್ಕ ಪಟ್ಟಣದ ಅಭಿವೃದ್ದಿಗಾಗಿ ಬಿಜೆಪಿ ಕಾಂಗ್ರೇಸ್ ಪರಸ್ಪರ ಸಹಕಾರದೊಂದಿಗೆ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ನಡೆದಿದೆ ಇದು ಹೊಂದಾಣಿಕೆಯಲ್ಲ ಎಂದು ಸ್ಪಷ್ಟಪಡಿಸಿದರು.
ಪಪಂಯಲ್ಲಿ ಕಾಂಗ್ರೇಸ್ 9, ಬಿಜೆಪಿ 8, ಹಾಗೂ 3 ಪಕ್ಷೇತರ ಸದಸ್ಯರಿದ್ದಾರೆ, ಅಧಿಕಾರಕ್ಕೆ ಬರಲು ಕಾಂಗ್ರೇಸ್ ಮತ್ತು ಬಿಜೆಪಿಗೂ ಅಂಖ್ಯಾ ಬಲ ಕಡಿಮೆ ಇತ್ತು. ಕಾಂಗ್ರೇಸ್‌ನಿಂದ ಇಬ್ಬರ ಸದಸ್ಯರು ಹೊರ ಹೋಗಿದ್ದಾರೆ. ಈಗ ಪಕ್ಷೇತ್ರರ ಸದಸ್ಯೆ ಬಿ. ರೇಖಾ ಅವರನ್ನು ಕಾಂಗ್ರೇಸ್‌ಗೆ ಸೇರಿಸಿಕೊಂಡಾಗ ನಮ್ಮ ಸದಸ್ಯರ ಸಂಖ್ಯೆ 8ಕ್ಕೇರಿತು. ಆಗ ಕಾಂಗ್ರೇಸ್ ನಿಂದ ಬಿ. ರೇಖಾ ಅವರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.
ಬಿಜೆಪಿಯಿಂದ  ಜಿ.ಸಿದ್ದಯ್ಯ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಪಟ್ಟಣದ ಅಭಿವೃದ್ದಿಗಾಗಿ ಪರಸ್ಪರ ಸಹಕಾರ ಮನೋಭಾವದಿಂದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಆಯ್ಕೆ ಮಾಡಲಾಗಿದೆ. ಇದರಲ್ಲಿ  ಹೊಂದಾಣಿಕೆಯಾಗಲಿ ಮೈತ್ರಿಯಾಗಲಿ ಎರಡೂ ಇಲ್ಲ ಕೇವಲ ಪರಸ್ಪರ ಸಹಕಾರ. ಸಮಯದ ಕೊರತೆ ಇದ್ದುದರಿಂದ ಉಪಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದರು.
ಕಾಂಗ್ರೇಸ್‌ನ ದೊಡ್ಡ ರಾಮಣ್ಣ, ಹನುಮನಹಳ್ಳಿ ಕುರಿ ಶಿವಮೂರ್ತಿ, ದಾರುಕೇಶ ಹಾಗೂ ಪಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ತೋಟದ ರಾಮಣ್ಣ, ಬಿಜೆಪಿ ಕೊಟ್ಟೂರು ಘಟಕ ಅಧ್ಯಕ್ಷ ಭರಮನಗೌಡ ಪಾಟೇಲ್, ಪಪಂ ಸದಸ್ಯ ಕೆ. ಎಸ್. ಈಶ್ವರಗೌಡ ,ಬದ್ದಿ ಮರಿಸ್ವಾಮಿ, ದುರುಗೇಶ್ ಮುಂತಾದವರಿದ್ದರು.