ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ರದ್ದು
ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.01: ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿಯ ಚಿರಿಬಿ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಮೂಗಬಸವೇಶ್ವರ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
2007 ನೇ ಸಾಲಿನಲ್ಲಿ ಚಿರಿಬಿ ಮತ್ತು ರಾಂಪುರ ಗ್ರಾಮಸ್ಥರ ನಡುವೆ ದೇವಸ್ಥಾನದ ಪೂಜಾ ಕಾರ್ಯಕ್ರಮಗಳನ್ನು ನಡೆಸುವ ಸಂಬಂಧ ಘರ್ಷಣೆ ಉಂಟಾದ ಮೇರೆಗೆ ಅಂದಿನಿಂದ ಕಳೆದ ಸಾಲಿನವರೆಗೆ ಸದರಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ರದ್ದು ಮಾಡಲಾಗಿರುತ್ತದೆ,
ಇದಕ್ಕೆ ಸಂಬಂಧಿಸಿದಂತೆ ಕಳೆದ 2007ನೇ ಸಾಲಿನಿಂದ ಪ್ರಸ್ತುತ ದಿನಗಳವರೆಗೆ ಎರಡು ಗ್ರಾಮಗಳ ಗ್ರಾಮಸ್ಥರನ್ನು ಸೇರಿಸಿ ಅನೇಕ ಬಾರಿ ಶಾಂತಿ ಸಭೆ ಕರೆಯಲಾಗಿ 2 ಗ್ರಾಮದವರ ನಡುವೆ ಭಿನ್ನಾಭಿಪ್ರಾಯ ಮುಂದುವರಿಯುವುದರಿಂದ ಯಾವುದೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿರುವುದಿಲ್ಲ. ಅಲ್ಲದೇ ಎರಡು ಗ್ರಾಮಸ್ಥರ ಮಧ್ಯೆ ದ್ವೇಷ ಪೂರಿತಕರ ಅಹಿತಕರ ವಾತಾವರಣ ಇರುತ್ತದೆ.
2020ನೇ ಸಾಲಿನಲ್ಲಿ ಎರಡು ಗ್ರಾಮಗಳು ಈ ಜಾತ್ರೆ ಸಂಬಂಧ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಕುರಿತು ಕೂಡ್ಲಿಗಿಯ ಹಿರಿಯ ಶ್ರೇಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ. ಈ ಪ್ರಕರಣ ಅಂತಿಮ ತೀರ್ಮಾನ ಇದುವರೆಗೂ ಆಗಿರುವುದಿಲ್ಲ. ಹಾಗಾಗಿ ಇದೇ 2ರಂದು ನಡೆಯುವ ಮೂಗಬಸವೇಶ್ವರ ದೇವಸ್ಥಾನದ ರಥೋತ್ಸವ ಹಾಗೂ 3, 4 ರಂದು ನಡೆಯುವ ಕುಸ್ತಿ ಪಂದ್ಯಾವಳಿಗಳನ್ನು ಮತ್ತು ಇನ್ನಿತರೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಪಡಿಸಿ, ಕೇವಲ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಹಣ್ಣು, ಕಾಯಿ ಮಾಡಿಸಿಕೊಂಡು ಹೋಗಲು ಸೀಮಿತಗೊಳಿಸಿ, ಜಾತ್ರೆಯನ್ನು ನಿಷೇಧಿಸಿ ಆದೇಶವನ್ನು ಜಿಲ್ಲಾಧಿಕಾರಿಗಳು ಹೊರಡಿಸಿದ್ದಾರೆ.