ಮಹಿಳಾ ಸದಸ್ಯತ್ವ ಅಭಿಯಾನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಚಾಲನೆ
ಸಂಜೆವಾಣಿ ನ್ಯೂಸ್
ಮೈಸೂರು.ಸೆ.01:- ಜಿಲ್ಲಾ ಭಾರತೀಯ ಜನತಾ ಪಾರ್ಟಿ ಗ್ರಾಮಾಂತರ ಮಹಿಳಾ ಮೋರ್ಚಾ ವತಿಯಿಂದ ಈ ದಿನ ಪಕ್ಷದ ಕಛೇರಿಯಲ್ಲಿ ನಡೆದ “ಮಹಿಳಾ ಕಾರ್ಯಗಾರ” ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಿಳಾ ಪದಾಧಿಕಾರಿಗಳು ಹಾಗೂ ಮಹಿಳಾ ಕಾರ್ಯಕರ್ತರ ಜೊತೆ “ಮಹಿಳಾ ಸದಸ್ಯತ್ವ ಹಾಗೂ ಸಂಘಟನೆಯ ಕುರಿತು ಸುದೀರ್ಘ ಸಮಾಲೋಚನೆ ನಡೆಯಿತು.
ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಎಲ್.ಆರ್ ಮಹದೇವಸ್ವಾಮಿ ಮಹಿಳಾ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಮೋರ್ಚಾದ ಪದಾಧಿಕಾರಿಗಳು ತಮ್ಮ ತಮ್ಮ ಬೂತ್ ಗಳಲ್ಲಿ ಬೂತ್ ಅಧ್ಯಕ್ಷರುಗಳ ಜೊತೆಗೂಡಿ ಅತೀ ಹೆಚ್ಚು ಮಹಿಳಾ ಸದಸ್ಯತ್ವ ಮಾಡಿಸುವ ಮೂಲಕ ಭಾರತೀಯ ಜನತಾ ಪಾರ್ಟಿಗೆ ಹೆಚ್ಚಿನ ಮಹಿಳಾ ಬಲ ದೊರೆಯುವಂತೆ ಮಾಡಬೇಕು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತದ ಗುರಿಯಲ್ಲಿ ಮಹಿಳೆಯರಿಗೆ ಸ್ವಾವಲಂಬಿಗಳಾಗಿ ದುಡಿಯಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನೆಲ್ಲ ಮಹಿಳೆಯರು ಸದುಪಯೋಗ ಪಡೆದುಕೊಳ್ಳುವ ನಿಟ್ಟಿನಲ್ಲಿ ನಾರಿಶಕ್ತಿಯರು ಮುಂದೆ ಬರಬೇಕು ಎಂದರು.
ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಇವೆಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರ ಅಪಾರವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ಜನತಾ ಪಾರ್ಟಿಯಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಮೋರ್ಚಾ ಹೆಣ್ಣು ಮಕ್ಕಳು ತಮ್ಮ ವಾರ್ಡ್ ಗಳು ಹಾಗೂ ಬೂತ್ ಗಳಲ್ಲಿ ಸದಸ್ಯತ್ವ ಅಭಿಯಾನದ ಅಂಗವಾಗಿ 88800002024 ಈ ಟೋಲ್ ಫ್ರೀ ನಂಬರಿಗೆ ಮಿಸ್ ಕಾಲ್ ಕೊಡಿಸುವ ಮೂಲಕ ಅತೀ ಹೆಚ್ಚು ಮಹಿಳೆಯರನ್ನು ಸದಸ್ಯತ್ವ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಪಕ್ಷ ಬಲಗೊಳಿಸಬೇಕು. ಪ್ರತೀ ಚುನಾವಣೆಗಳಲ್ಲಿಯೂ ಮಹಿಳಾ ಪಾತ್ರ ಹೆಚ್ಚಿನದ್ದಾಗಿರಬೇಕು.
ಇಡೀ ರಾಷ್ಟ್ರದಲ್ಲಿ ಮಹಿಳಾ ಸದಸ್ಯತ್ವ ಹೆಚ್ಚಿರುವ ಪಕ್ಷ ನಮ್ಮ ಬಿಜೆಪಿಯದ್ದಾಗಿರಬೇಕು. ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರವು ಹಲವಾರು ಭ್ರಷ್ಟಾಚಾರ ಹಗರಣಗಳಲ್ಲಿ ಪಾಲುದಾರರಾಗಿದ್ದು, ಅಭಿವೃದ್ಧಿಯ ಬದಲಾಗಿ ಭ್ರಷ್ಟಾಚಾರವನ್ನೇ ಪ್ರತಿನಿತ್ಯದ ಕಾರ್ಯವನ್ನಾಗಿ ಮಾಡಿಕೊಂಡಿದ್ದಾರೆ. ಜನರು ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಬೇಸತ್ತು ಹೋಗಿದ್ದಾರೆ. ಪ್ರತೀ ತಾಲ್ಲೂಕಿನಲ್ಲೂ ಅಭಿವೃದ್ಧಿ ಕೆಲಸಗಳಿದೆ ಜನ ಸರ್ಕಾರಕ್ಕೆ ಇಡಿ ಶಾಪ ಹಾಕುತ್ತಿದ್ದಾರೆಂದು ಹೇಳಿದರು.
ಮುಖ್ಯಮಂತ್ರಿಗಳು ತವರು ಜಿಲ್ಲೆಯಲ್ಲಿಯೇ “ಮುಡಾ ಹಗರಣ” ದಲ್ಲಿ ಭಾಗಿಯಾಗಿದ್ದು ರಾಜ್ಯದ ಜನತೆಗೆ ಇವರಿಂದ ಯಾವ ರೀತಿಯಾದ ಆಡಳಿತ ಕೊಡಲು ಸಾಧ್ಯವೆ?, ಬಿಟ್ಟಿ ಭಾಗ್ಯಗಳನ್ನು ಪೂರೈಸಲಾಗದ ಕಾಂಗ್ರೆಸ್ ಸರ್ಕಾರದ ವಿವಿಧ ಅನುದಾನಗಳನ್ನು ತಮಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿರುವುದು ಇದರಿಂದ ಇಡೀ ರಾಜ್ಯದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿದೆ. ಅಭಿವೃದ್ಧಿ ಇಲ್ಲದೇ ನಮ್ಮ ರಾಜ್ಯ ಸುಮಾರು 30 ವರ್ಷಗಳ ಹಿಂದೆ ಉಳಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ನ ಭ್ರಷ್ಟಾಚಾರದ ಬಗ್ಗೆ ವಿವರಿಸಿದರು.
ಎಂ.ಬಿ.ಪಾಟೀಲ್ ರವರ ಮಾತುಗಳು ರಾಜಕೀಯವಾಗಿ ಆರೋಗ್ಯಕರವಾಗಿರಬೇಕೋ ಹೊರತು ಪರಸ್ಪರ ವಿರೋಧಿ ರೀತಿಯಲ್ಲಿರಬಾರದು ಛಲವಾದಿ ನಾರಾಯಣಸ್ವಾಮಿ ಯವರು ವಿರೋಧ ಪಕ್ಷದ ನಾಯಕರಿದ್ದಾರೆ. ಆ ಸ್ಥಾನಕ್ಕೆ ಗೌರವ ಕೊಡಬೇಕು ಟೀಕಿಸುವ ಭರದಲ್ಲಿ ಏನೇನೋ ಮಾತನಾಡಬಾರದು ರಾಜಕೀಯವಾಗಿ ವಿರೋಧಿಸುವಾಗ ಮಾತುಗಳ ಮೇಲೆ ಹಿಡಿತವಿರಬೇಕು ಎಂದು ಎಂ.ಬಿ ಪಾಟೀಲ್ ಹೇಳಿಕೆ ಖಂಡಿಸಿದರು.
ನಂತರ ಮಾತನಾಡಿದ ರಾಜ್ಯ ಕಾರ್ಯದರ್ಶಿ ಲೋಕೇಶ್ ಅಂಬೆಗಲ್, ಭಾರತೀಯ ಜನತಾ ಪಾರ್ಟಿಯಲ್ಲಿ ಮಹಿಳಾ ಮೋರ್ಚಾ ದವರು ರಾಜ್ಯದೆಲ್ಲೆಡೆ ಆಕ್ಟಿವ್ ಆಗಿ ಕೆಲಸ ಮಾಡುತ್ತಿದ್ದು, “ಮಹಿಳಾ ಸದಸ್ಯತ್ವ” ವು ಮೈಲಿಗಲ್ಲು ಪಡೆಯಬೇಕೆಂದು ಅಭಿಪ್ರಯಿಸಿದರು. ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರು ಪ್ರತೀ ವಿಧಾನಸಭಾ ಚುನಾವಣೆಯಲ್ಲಿಯೂ ತಮ್ಮ ಸಂಘಟನೆಯ ಮೂಲಕ ಮೋದಿ ಜೀರವರು ಹೆಣ್ಣು ಮಕ್ಕಳಿಗೆ ನೀಡಿರುವ ಯೋಜನೆಗಳ ಕುರಿತು ಗ್ರಾಮೀಣ ಭಾಗಗಳಲ್ಲಿ ಮನದಟ್ಟು ಮಾಡುವುದರೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಇದು ಹೀಗೆಯೇ ಮುಂದುವರೆಯಬೇಕು ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ನಳಿನಿಗೌಡ, ಪ್ರಧಾನಕಾರ್ಯದರ್ಶಿ ಶ್ರೀಮತಿ ನಂದಿನಿ, ರಾಧಿಕ, ಮಂಡಲ ಮಹಿಳಾಮೋರ್ಚಾ ಅಧ್ಯಕ್ಷರು ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.