ರಾಜೇಂದ್ರ ಶ್ರೀ ಸದ್ಭಾವನಾ ಪ್ರಶಸ್ತಿ ಪ್ರಧಾನ
ಸಂಜೆವಾಣಿ ನ್ಯೂಸ್
ಮೈಸೂರು.ಸೆ.01:- ಒಂದು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ನಾಡಿನ ಸುಪ್ರಸಿದ್ಧ ಶ್ರೀಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಜಗದ್ಗುರು ಪರಂಪರೆಯ 23ನೇ ಜಗದ್ಗುರುಗಳಾದ ಶ್ರೀಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರು ಶಿಕ್ಷಣದ ಮಹತ್ವವನ್ನು ಜಗತ್ತಿಗೆ ಸಾರಿದ ಶಿಕ್ಷಣ ಕ್ರಾಂತಿಯ ಕಾರಣಿಕರೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ಅಗ್ರಹಾರದ ತ್ಯಾಗರಾಜ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದವತಿಯಿಂದ ನಡೆದ ತಿಲಕ ಡಾ. ಶ್ರೀ ಶಿವರಾತ್ರಿ ರಾಜೇಂದ್ದ ಸ್ವಾಮೀಜಿಯವರ 109 ನೇ ಜಯಂತಿ ಮಹೋತ್ಸವ ಹಾಗೂ “ಶ್ರೀ ಶಿವರಾತ್ರಿ ರಾಜೇಂದ್ರ ಸದ್ಭಾವನಾ ಪ್ರಶಸ್ತಿ” ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದಾಗಿದ್ದು ಪ್ರತಿಯೊಬ್ಬರೂ,ಅದರಲ್ಲೂ ವಿಶೇಷವಾಗಿ ಗ್ರಾಮೀಣ ಬಡ ಮಕ್ಕಳು ಅಕ್ಷರ ಕಲಿತು ವಿದ್ಯಾವಂತರಾಗಬೇಕೆಂಬ ಸದಾಶಯದಿಂದ ಸ್ವಾತಂತ್ರ ಪೂರ್ವದಲ್ಲೇ ಮೈಸೂರು ಭಾಗದಲ್ಲಿ ಅಕ್ಷರ ಬೀಜ ಬಿತ್ತಿದ ಮಹಾತ್ಮರು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳೆಂದರು.
ಊಟ, ವಸತಿ, ವಿದ್ಯೆ ಸೇರಿ ತ್ರಿವಿಧ ದಾಸೋಹಿಯಾಗಿ ಮಾನವ ಸೇವೆಗಾಗಿ ತಮ್ಮ ಇಡೀ ಜೀವನವನ್ನು ಸಮರ್ಪಿಸಿಕೊಂಡಿದ್ದ ಸಾರ್ಥಕ ಬದುಕಿನ ಸಂತ ರಾಜೇಂದ್ರ ಶ್ರೀಗಳು ವಿಶೇಷವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟವರು. ದೂರದೃಷ್ಟಿಯುಳ್ಳ ಮಹಾಜ್ಞಾನಿಯಾದ ಅವರು ಕೇವಲ ಬೆರಳೆಣಿಕೆ ಮಂದಿ ವಿದ್ಯಾರ್ಥಿಗಳಿಂದ ಶಾಲೆ ಪ್ರಾರಂಭಿಸಿ ಅಂದು ನೆಟ್ಟ ಪುಟ್ಟ ಅಕ್ಷರ ಸಸಿ ಇಂದು ಬೃಹತ್ ಶೈಕ್ಷಣಕ ವೃಕ್ಷವಾಗಿ ಬೆಳೆದು ನಿಂತಿದೆ.ಇದರ ನೆರಳಿನಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಸಹಸ್ರಾರು ವಿದ್ಯಾಸಂಸ್ಥೆಗಳಿದ್ದು ಕಲಿಯುವವರಿಗೆ ಎಲ್ಲಾ ರೀತಿಯ ಶಿಕ್ಷಣವೂ ಇಲ್ಲಿ ದೊರೆಯುತ್ತಿದೆ. ಈ ದಿಸೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅಪಾರವಾಗಿದ್ದು ಶಿಕ್ಷಣ ಕಾಶಿಯನ್ನೇ ಸೃಷ್ಟಿಸಿದ್ದಾರೆ. ಶ್ರೀಗಳು ಬಿತ್ತಿದ ಅಕ್ಷರದ ಬೀಜ,ನೆಟ್ಟ ಶಿಕ್ಷಣದ ಗಿಡ, ಈಗ ಜೆಎಸ್‍ಎಸ್ ಮಹಾ ವಿದ್ಯಾಪೀಠ ಎಂಬ ಹೆಸರಿನಲ್ಲಿ ಹೆಮ್ಮರವಾಗಿದ್ದು, ಇಂದಿನ ಜಗದ್ಗುರುಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಗಳು ಸಹ ಇದನ್ನು ಮತ್ತಷ್ಟು ಬೃಹತ್ತಾಗಿ ಬೆಳೆಸುತ್ತಿದ್ದಾರೆ. ಇದರಿಂದಾಗಿ ಇಂದು ಲಕ್ಷಾಂತರ ಮಂದಿ ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಣದ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆಂದ ಅವರು, ಒಂದು ಸರ್ಕಾರ ಕೂಡ ಮಾಡಲಾಗದಷ್ಟು ಶೈಕ್ಷಣಿಕ ಕೆಲಸಗಳನ್ನು ಜೆಎಸ್‍ಎಸ್ ವಿದ್ಯಾಸಂಸ್ಥೆ ಮಾಡುತ್ತಿದ್ದು ಇದನ್ನು ನಮ್ಮ ಸಮಾಜ ಸದ್ವಿನಿಯೋಗ ಪಡಿಸಿ ಕೊಳ್ಳಬೇಕೆಂದು ಹೇಳಿದರು.
ಇದಕ್ಕೂ ಮುನ್ನ ಲಿಂಗೈಕ್ಯ ರಾಜೇಂದ್ರಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯ ಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಮಾಲಂಗಿ ಸುರೇಶ್ ಅವರು ಮಾತನಾಡಿ, ಅಕ್ಷರಾನ್ನಅರಿವಿನ ದಾಸೋಹಿಗಳಾಗಿ ಮಾನವ ಕುಲವನ್ನು ಉದ್ದರಿಸಲು ಭುವಿಗೆ ಬಂದ ಭಗವಂತನಂತಿದ್ದರು ರಾಜೇಂದ್ರ ಶ್ರೀಗಳು. ಎಲ್ಲರೂ ತನ್ನವರೆಂಬ ಭಾವ ತುಂಬಿಕೊಂಡಿದ್ದ ಅಂತಹ ಹೃದಯವಂತ ಸ್ವಾಮೀಜಿ ನಡೆದಾಡಿದ ಪುಣ್ಯ ನೆಲ ನಮ್ಮದೆಂದು ಹೆಮ್ಮೆಯಿಂದ ಹೇಳಿದರು. ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಗುರು ವಿದ್ಯಾ ವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಸೋಮಶೇಖರ ಸ್ವಾಮಿಗಳು, ರಾಜೇಂದ್ರ ಶ್ರೀಗಳ ಕತೃತ್ವ ಶಕ್ತಿ ಮತ್ತು ಸಂಕಲ್ಪ ಶಕ್ತಿ ಹಾಗು ದೂರ ದೃಷ್ಟಿ ಬಹುದೊಡ್ಡದಿತ್ತು. ಹಾಗಾಗಿ ಅವರು ಅಂದುಕೊಂಡಿದ್ದನ್ನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಾಗಿ ಸಾಧಿಸಿದರು ಎಂದು ಹೇಳಿದರು.
ಇದೇ ವೇಳೆ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಹೆಸರಿನಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸದ್ಭಾವನಾ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳ ಸಾಧಕರಾದ ಶ್ರೀ ವಿಷ್ಣು ಸಾಲಿಗ್ರಾಮ ಸ್ವಾಮಿ ಗಳು( ಧಾರ್ಮಿಕ ಕ್ಷೇತ್ರ), ಶ್ರೀ ಯೋಗೇಶ್ ಚುಂಚನಹಳ್ಳಿ (ಶಿಕ್ಷಣ ಕ್ಷೇತ್ರ), ಶ್ರೀ ವೀರೇಶ್ ವೀರಪ್ಪ (ಮಾಧ್ಯಮ ಕ್ಷೇತ್ರ) ಅವರುಗಳಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಪ್ರಾರಂಭ ದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗುರು ನಮನ ಸಲ್ಲಿಸಲಾಯಿತು. ಖ್ಯಾತ ಸಮಾಜ ಸೇವಕ ಹಾಗೂ ಸಂಸ್ಕೃತಿ ಚಿಂತಕ ಡಾ.ಕೆ.ರಘು ರಾಮ್ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಸದಸ್ಯೆ ಜ್ಯೋತಿ ರೇಚಣ್ಣ, ಶ್ರೀ ಕೃಷ್ಣ ಲಲಿತ ಕಲಾಮಂದಿರದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಎಂ.ಪರಮೇಶ್, ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜು ಇನ್ನಿತರರು ಉಪಸ್ಥಿತರಿದ್ದರು.