ಸ್ವಚ್ಛತೆ ಕಾಣದ ಚಾಮರಾಜನಗರ ಕೊಳಚೆಯ ಆಗರ:ಸಾಂಕ್ರಾಂಮಿಕ ರೋಗಕ್ಕೆ ಆಹ್ವಾನ ನೀಡುತ್ತಿರುವ ಕಸದ ರಾಶಿ ರಾಶಿ
ಸಂಜೆವಾಣಿ ವಾರ್ತೆ
ಹನೂರು.ಸೆ.01:- ಪಟ್ಟಣ ಪ್ರದೇಶದಲ್ಲಿ ಕಸ ತೆರವುಗೊಳಿಸದೇ ಇರುವ ಹಿನ್ನಲೆಯಲ್ಲಿ ಪಟ್ಟಣದ ಜನತೆಗೆ ಸಾಂಕ್ರಾಂಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.
ಚಾಮರಾಜನಗರ ಪಟ್ಟಣ ಪ್ರದೇಶದಲ್ಲಿ ಪ್ರತಿನಿತ್ಯ ಪ್ರಮುಖ ರಸ್ತೆ ಬದಿಗಳಲ್ಲಿ ಕಸ, ತ್ಯಾಜ್ಯ ವಸ್ತುಗಳು ತುಂಬಿ ತುಳುಕುತಿದೆ. ಎಲ್ಲೆಂದರಲ್ಲಿ ಕಸದ ರಾಶಿಗಳು ಪಟ್ಟಣ ಪ್ರದೇಶಕ್ಕೆ ಸ್ವಾಗತ ನೀಡುತ್ತಾ ನಿಂತಿವೆ.
ನಗರಸಭೆಯಲ್ಲಿನ ಆರೋಗ್ಯ ನಿರೀಕ್ಷಕರು ಹೆಸರಿಗೆ ಮಾತ್ರ ಇದ್ದು, ಸಮರ್ಪಕವಾಗಿ ಕಸ ವಿಲೆವಾರಿಗೆ ಮುಂದಾಗದೇ ಇರುವುದು ಮುಂದಿನ ದಿನಗಳಲ್ಲಿ ಸಾಂಕ್ರಾಂಮಿಕ ರೋಗಗಳು ಹರಡುವುದರಲ್ಲಿ ಸಂದೇಹವಿಲ್ಲ.
ಕಸ ಹಾಗೂ ತ್ಯಾಜ್ಯ ವಸ್ತುಗಳು ರಸ್ತೆ ಬದಿ, ಕರಂಟ್ ಕಂಬಗಳ ಬುಡದಲ್ಲಿ ಹೀಗೆ ಎಲ್ಲೆಂದರಲ್ಲಿ ಬಿದ್ದು ಹದಿನೈದು ದಿನಗಳಾದರೂ ನಗರಸಭೆಯ ಸಿಬ್ಬಂದಿಗಳು ಕಸ ವಿಲೆವಾರಿಗೆ ಮುಂದಾಗದೇ ಇರುವುದು ನಗರಸಭೆಯ ಪೌರಾಯುಕ್ತರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಮೂರು ದಿನಗಳ ಮುನ್ನ ನಗರದ ಶ್ರೀ ವೀರಭದ್ರೇಶ್ವರ ದೇವಾಲಯ ಹಿಂಬದಿ ರಸ್ತೆಯ ಮೂಲಕ ಕ್ರೀಡಾಂಗಣ ತನಕ ಕಸವನ್ನು ಒಂದೆಡೆ ಹಾಕಿದ ನಗರಸಭೆಯ ಸಿಬ್ಬಂದಿಗಳು ಇಂದಿಗೂ ಕಸ ತೆಗೆಸುವ ಗೋಜಿಗೆ ಹೋಗಿಲ್ಲ. ರಾಷ್ಟ್ರೀಯ ಹಬ್ಬಗಳು, ಸಚಿವರು, ಜಿಲ್ಲಾಧಿಕಾರಿಗಳು ಪ್ರವಾಸ ಕೈಗೊಂಡರೆ ಮಾತ್ರ ರಸ್ತೆ ಸ್ವಚ್ಚ ಮಾಡುವ ನಗರಸಭೆಯ ಸಿಬ್ಬಂದಿಗಳು ಮಾಮೂಲಿ ದಿನಗಳಲ್ಲಿ ನಿರ್ಲಕ್ಷ್ಯ ತೋರುತ್ತಾರೆ.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಹಿಂಭಾಗದಲ್ಲಿ ಕಸದ ರಾಶಿಯೇ ಬಿದ್ದಿದೆ. ಇದನ್ನು ತೆರವುಗೊಳಿಸಲು ಮುಂದಾಗದ ನಗರ ಸಭೆಯ ಕಾರ್ಯವೈಖರಿಯ ಬಗ್ಗೆ ಅಲ್ಲಿನ ನಿವಾಸಿಗಳು ನಗರಸಭೆಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ನಗರಸಭೆಯ ಆರೋಗ್ಯ ನಿರೀಕ್ಷಕರ ನಡುವಿನ ಭಾಂಧ್ಯವದ ಕೊರತೆ ಹಾಗೂ ಪೌರಾಯುಕ್ತರ ಕರ್ತವ್ಯದ ನಿರಾಸಕ್ತಿಯ ನಡುವೆ ಜನ ಸಾಮಾನ್ಯರು ನಿತ್ಯ ಬವಣೆ ಅನುಭವಿಸುವಂತಾಗಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳನ್ನು ಸಾರ್ವಜನಿಕರು ಸಂಪರ್ಕಿಸಿದರೆ, ಮಾತಿನಲ್ಲೇ ಮರಳು ಮಾಡಿ ಕಳುಹಿಸುವರು ಜೊತೆಗೆ ತಮ್ಮ ಮೇಲಿನ ಜವಾಬ್ದಾರಿಯನ್ನು ಮತ್ತೊಬ್ಬರ ಕಡೆ ತೋರಿಸಿ ನುಣುಚಿಕೊಳ್ಳುತ್ತಿದ್ದಾರೆ.
ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಶಿಲ್ಪನಾಗ್ ರವರು ಸಹ ಪಟ್ಟಣ ಪ್ರದೇಶ ಸ್ವಚ್ಚತೆಗೆ ಗಮನ ಹರಿಸದೇ ಇರುವುದು ಗಮನಾರ್ಹವಾಗಿದೆ. ಕೇವಲ ತಮ್ಮ ನಿವಾಸ ಸುತ್ತ ಸ್ವಚ್ಚತೆ ಇದ್ದರೆ ಸಾಕು ಎನ್ನುವಂತೆ ಮಾತ್ರ ಜಿಲ್ಲಾಧಿಕಾರಿಗಳು ಇರುವುದು ನಾಗರೀಕರ ಅಸಮಧಾನಕ್ಕೆ ಕಾರಣವಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಚತೆ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ನಗರಸಭೆಯ ಅಧಿಕಾರಿಗಳು ಕಸ ಬಿದ್ದಿರುವ ಪ್ರದೇಶದಲ್ಲಿಒಂದೆರಡು ದಿನ ವಾಸವಿದ್ದರೆ ಸಾರ್ವಜನಿಕರ ಸಮಸ್ಯೆ ತಿಳಿಯಲಿದೆ. ಈಗಲಾದರೂ ನಗರಸಭೆಯ ಆರೋಗ್ಯ ನಿರೀಕ್ಷಕರು ತಮ್ಮ ವೈಯಕ್ತಿಯ ಧೋರಣೆಯನ್ನು ಬದಿಗೊತ್ತಿ ನಗರಸಭೆಯ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಮುಂದಾಗಬೇಕಿದೆ. ಇಲ್ಲದಿದ್ದರೆ ನಾಗರೀಕರೇ ನಗರಸಭೆಯ ಮುಂದೆ ಕಸ ಸುರಿಯುವ ಚಳವಳಿ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.