ಪುರಸಭಾ ಅಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ತಡೆಯಾಜ್ಞೆ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.01: ನಾಳೆ ಸೋಮವಾರ ನಿಗಧಿಯಾಗಿದ್ದ ಕೆ.ಆರ್.ಪೇಟೆ ಪುರಸಭೆಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ರಾಜ್ಯ ಹೈಕೋರ್ಟ್ ತಡೆಯಾಜ್ಷೆ ನೀಡಿದ್ದು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಿಗಧಿಯಾಗಿರುವಂತೆ ಸೆ.02 ರಂದು ನಡೆಯಲಿದೆ.
ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾಗಿದ್ದು ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ ನಿಗಧಿಯಾಗಿದೆ. ಪುರಸಭೆಯಲ್ಲಿ ಜೆಡಿಎಸ್ ಪಕ್ಷದ 03, ಜೆಡಿಎಸ್ ಪಕ್ಷದಿಂದ ಚುನಾಯಿತರಾಗಿ ಬಿಜೆಪಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡರ ಬಣಕ್ಕೆ ಸೇರಿದ 08, ಕಾಂಗ್ರೆಸ್ ಪಕ್ಷದ 10, ಬಿಜೆಪಿ 01 ಹಾಗೂ 01 ಪಕ್ಷೇತರ ಸದಸ್ಯ ಸೇರಿದಂತೆ 23 ಜನ ಚುನಾಯಿತ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಪ್ರಭಲ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್ ಪಕ್ಷದ ಸದಸ್ಯ ಕೆ.ಸಿ.ಮಂಜುನಾಥ್ ಪುರಸಭೆಯ ನೂತನ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲು ಪಡಿಸಿರುವುದನ್ನು ಪ್ರಶ್ನಿಸಿ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಕೆ.ಸಿ.ಮಂಜುನಾಥ್ ಅವರ ಅರ್ಜಿಯನ್ನು ಪುರಸ್ಕರಿಸಿರುವ ರಾಜ್ಯ ಹೈಕೋರ್ಟ್ ಸೆ.02 ರಂದು ನಡೆಯಬೇಕಾಗಿದ್ದ ಪುರಸಭೆಯ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದ್ದು ಉಪಾಧ್ಯಕ್ಷರ ಆಯ್ಕೆ ನಿಗದಿಯಂತೆ ನಡೆಯಲಿದೆ.
ವಿಪ್ ಜಾರಿಗೊಳಿಸಿದ ಕಾಂಗ್ರೆಸ್:– ಸೆ.02 ರಂದು ನಡೆಯಲಿರುವ ಪುರಸಭೆಯ ಉಪಾಧ್ಯಕ್ಷರ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷ ಸೌಭಾಗ್ಯ ಉಮೇಶ್ ಅವರನ್ನು ಕಣಕ್ಕಿಳಿಸುತ್ತಿದ್ದು ಸೌಭಾಗ್ಯ ಪರ ಸದಸ್ಯರು ಬೆಂಬಲ ಸೂಚಿಸುವಂತೆ ವಿಪ್ ಜಾರಿಗೊಳಿಸಿದೆ.
ಪಟ್ಟಣದ ಹೇಮಾವತಿ ಬಡಾವಣೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಪಟ್ಟಣದ 14ನೇ ವಾರ್ಡಿನ ಸದಸ್ಯೆ ಸೌಭಾಗ್ಯ ಅವರನ್ನು ಉಪಾಧ್ಯಕ್ಷ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಪಕ್ಷ ನಿರ್ಧರಿಸಿದ್ದು ಸೌಭಾಗ್ಯ ಪರ ಮತ ಚಲಾಯಿಸುವಂತೆ ಸೂಚಿಸಿ ಪಕ್ಷದ ಎಲ್ಲಾ 10 ಜನ ಸದಸ್ಯರಿಗೂ ವಿಪ್ ಜಾರಿಗೊಳಿಸುತ್ತಿರುವುದಾಗಿ ತಿಳಿಸಿದರು. ಕಾಂಗ್ರೆಸ್ ಪಕ್ಷದ ಎಲ್ಲಾ 10 ಜನ ಸದಸ್ಯರು ಒಗ್ಗಟಿನಿಂದಿದ್ದು ಪಕ್ಷದ ಅಭ್ಯರ್ಥಿಯ ಪರ ಮತ ಚಲಾಯಿಸಲಿದ್ದಾರೆನ್ನುವ ವಿಶ್ವಾಸ ವ್ಯಕ್ತಪಡಿಸಿದ ಸಿ.ಡಿ.ಗಂಗಾಧರ್ ಅನಂತರ ಪಕ್ಷದ ಮುಖಂಡರ ಜೊತೆಗೂಡಿ ಪಕ್ಷದ ಎಲ್ಲಾ 10 ಜನ ಸದಸ್ಯರ ಮನೆಗಳಿಗೂ ಎಡತಾಕಿ ಸಚೇತಕ ಆದೇಶ ಪ್ರತಿ(ವಿಪ್)ಯನ್ನು ನೀಡಿದರು. ಅಭ್ಯರ್ಥಿಗಳು ಮನೆಯಲ್ಲಿ ಇಲ್ಲದ ಕಡೆ ಅವರ ಮನೆ ಬಾಗಿಲಿಗೆ ವಿಪ್ ಆದೇಶದ ಪ್ರತಿಯನ್ನು ಅಂಟಿಸಿದರು.
ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್, ತಾಲೂಕು ಉಸ್ತುವಾರಿ ಚಿನಕುರಳಿ ರಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಹರಳಹಳ್ಳಿ ವಿಶ್ವನಾಥ್, ಬಿ.ನಾಗೇಂದ್ರ ಕುಮಾರ್, ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿ ಹಾಗೂ ವಿಪ್ ಜಾರಿಯ ವೇಳೆ ಹಾಜರಿದ್ದರು