ಸಂಭ್ರಮದಿಂದ ಜರುಗಿದ ರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.01: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬೆಟ್ಟದಹೊಸೂರು ಗ್ರಾಮದ ಬೆಟ್ಟದಲ್ಲಿರುವ ಉದ್ಭವ ಬೋಳಾರೆ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಬೋಳಾರೆ ರಂಗನಾಥಸ್ವಾಮಿ ಅವರ ಬ್ರಹ್ಮರಥೋತ್ಸವವು ಕಡೆ ಶ್ರಾವಣ ಶನಿವಾರದಂದು ಭಕ್ತಿ ಮತ್ತು ಶ್ರದ್ದೆ ಸಡಗರದಿಂದ ನಡೆಯಿತು.
ದೇವಸ್ಥಾನದ ಅರ್ಚಕರಾದ ಸುಂದರ್ ಮತ್ತು ಮನೋಹರ್ ಅವರು ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಅನಂತರ ರಥದಲ್ಲಿ ವಿರಾಜಮಾನನಾದ ರಂಗನಾಥಸ್ವಾಮಿಯವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು
ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್,ತಹಶಿಲ್ದಾರ್ ಆದರ್ಶ, ಬೋಳಾರೆ ರಂಗನಾಥ ಸ್ವಾಮಿ ದೇವಾಲಯ ಟ್ರಸ್ಟ್ ಪದಾಧಿಕಾರಿಗಳು, ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಉಘೇ ರಂಗನಾಥ, ಉಘೇ- ಉಘೇ ಬೋಳಾರೆ ರಂಗನಾಥ ಎಂಬ ಜಯಘೋಷಗಳೊಂದಿಗೆ ರಥವನ್ನು ದೇವಸ್ಥಾನದ ಸುತ್ತ ಎಳೆದರು.
ಈ ಸಂದರ್ಭದಲ್ಲಿ ಶಾಸಕ ಎಚ್.ಟಿ.ಮಂಜು ಮಾತನಾಡಿ ಬೋಳಾರೆ ರಂಗನಾಥಸ್ವಾಮಿಯವರ ಸನ್ನಿಧಿ ಇರುವ ಈ ಕ್ಷೇತ್ರಕ್ಕೆ ವಿಶೇಷ ಮಹತ್ವವಿದೆ. ಪುರಾಣ ಇತಿಹಾಸವಿದ್ದು ಪ್ರತಿ ಶ್ರಾವಣ ಮಾಸದ ನಾಲ್ಕು ಶನಿವಾರಗಳಂದು ವೀಶೇಷ ಪೂಜೆ ನಡೆದು ಕಡೆಯ ಶನಿವಾರ ಬ್ರಹ್ಮರಥೋತ್ಸವ ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ ಗ್ರಾಮಸ್ಥರು ಶ್ರೀಕ್ಷೇತ್ರದ ಮಹತ್ವ ಹೆಚ್ಚಿಸಲು ಶ್ರಮಿಸಬೇಕು ಶ್ರೀಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಸಮುಧಾಯಭವನ ನಿರ್ಮಾಣಕ್ಕೆ ನನ್ನ ಶಾಸಕರ ನಿಧಿಯಿಂದ 10 ಲಕ್ಷಹಣವನ್ನು ಬಿಡುಗಡೆ ಮಾಡಿದ್ದು ಜಿಲ್ಲೆಯ ಸಂಸದರೂ ಆಗಿರುವ ಕೇಂದ್ರ ಸಚಿವರನ್ನು ಶ್ರೀಕ್ಷೇತ್ರಕ್ಕೆ ಕರೆಸಿ ಇಲ್ಲಿನ ಸಮಗ್ರ ಅಭಿವೃದ್ದಿಗೆ ನೆರವಾಗುವ ಭರವಸೆ ನೀಡಿದರು.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ ಅನ್ಯ ಕಾರ್ಯನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಆಗಮಿಸಲು ಆಗಿಲ್ಲ. ಶ್ರೀಕ್ಷೇತ್ರದ ಅಭಿವೃದ್ದಿಗೆ ಅವಶ್ಯವಾದ ಅನುದಾನ ಮತ್ತು ಕೊಡುಗೆಯನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.