ಜೀವನದಲ್ಲಿ ಸಾಧಿಸುವ ಛಲವಿರಬೇಕು:ಶ್ವೇತಾ ಶ್ರೀನಿವಾಸ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೧: ಜೀವನದಲ್ಲಿ ಸಾಧಿಸಬೇಕೆಂಬ ದೃಢ ನಿಶ್ಚಯ ಹೊಂದಿರಬೇಕು. ಇದನ್ನು ಸಾಧಿಸಲು, ವಿದ್ಯಾರ್ಥಿಗಳು ಗುರುಗಳಿಂದ ಸದಾ ತಿಳಿವಳಿಕೆಯನ್ನು ಪಡೆದು, ಕಲಿಯುವ ಮನೋಭಾವವನ್ನು ನಿರಂತರವಾಗಿ ಉಳಿಸಿಕೊಳ್ಳಬೇಕು ಎಂದು ಬೆಂಗಳೂರಿನ ರಂಗಭೂಮಿ ಕಲಾವಿದೆ ಹಾಗೂ ರಂಗರಥ ಸಂಸ್ಥೆಯ ಸಂಸ್ಥಾಪಕಿ ಶ್ವೇತಾ ಶ್ರೀನಿವಾಸ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ, ವಸತಿ ನಿಲಯ ಹಾಗೂ ಕ್ರೀಡಾ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೨೦೨೩-೨೪ನೇ ಸಾಲಿನ ವಿದ್ಯಾರ್ಥಿನಿಯರಿಗೆ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾಭ್ಯಾಸವೆಂದರೆ ಪಠ್ಯಕ್ರಮದಲ್ಲಿ ಸಾಧನೆ ಮಾತ್ರವಲ್ಲ, ಅದು ವ್ಯಕ್ತಿತ್ವದ ರೂಪರೇಖೆ, ಶ್ರದ್ಧೆ, ಸಹನಶೀಲತೆ, ಮತ್ತು ಉದ್ದೇಶವನ್ನು ಕಟ್ಟುವ ಸೃಷ್ಟಿಕರ್ತ. ಭವಿಷ್ಯದ ನಾಯಕರಾಗಿ, ವಿದ್ಯಾರ್ಥಿನಿಯರು ಸಮಾಜದಲ್ಲಿ ಪರಿವರ್ತನೆಯನ್ನು ತರಲು ಅಪಾರ ಸಾಮರ್ಥ್ಯ ಹೊಂದಿದ್ದಾರೆ. ಈ ಸಾಮರ್ಥ್ಯವನ್ನು ಅರ್ಥೈಸಲು, ಅವರು ತಮ್ಮ ಗುರಿಗಳಿಗೆ ನಿಷ್ಠರಾಗಿರಬೇಕು, ತಮ್ಮ ಗುರುಗಳನ್ನು ಗೌರವಿಸಬೇಕು. ವಿದ್ಯಾರ್ಥಿನಿಯರು ಆಧುನಿಕತೆಯ ಜೊತೆಗೆ ಪರಂಪರೆಯ ಜ್ಞಾನವನ್ನು ಕೂಡ ಸಮತೋಲನದಿಂದ ಉಳಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಮನುಷ್ಯ ಮನುಷ್ಯನಾದಾಗ ಮಾತ್ರ ಪತ್ರಿಯೊಂದು ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ. ಜೀವನದಲ್ಲಿ ಸೋಲು ಮತ್ತು ಗೆಲವು ಎನ್ನುವ ಎರಡು ಮುಖಗಳನ್ನು ಸಮಭಾವನೆಯಿಂದ ಸ್ವೀಕರಿಸಬೇಕು, ಏಕೆಂದರೆ ಇವೆರಡೂ ಜೀವನದ ಅವಿಭಾಜ್ಯ ಭಾಗಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಮಾತನಾಡಿ, ಶೈಕ್ಷಣಿಕ ಕ್ಷೇತ್ರಕ್ಕೆ ಪೂರಕವಾಗಿ ವಿಶ್ವವಿದ್ಯಾನಿಲಯವು ಕೆಲಸಮಾಡುತ್ತಿದ್ದು, ವಿದ್ಯಾರ್ಥಿನಿಯರು ಇದರ ಉಪಯೋಗ ಪಡೆದುಕೊಂಡು ಶೈಕ್ಷಣಿಕ ರಂಗದಲ್ಲಿ ಅಭಿವೃದ್ಧಿಯನ್ನು ಸಾಧಿಸಿ ಒಳ್ಳೆಯ ವ್ಯಕ್ತಿತ್ವ ಪಡೆದುಕೊಳ್ಳಬೇಕು. ನಿಮ್ಮ ಮುಂದಿನ ಜೀವನಕ್ಕೆ ಬೇಕಾಗಿರುವ ಆತ್ಮಗೌರವ, ಘನತೆ ಗಳಿಸಬೇಕು. ನಮ್ಮ ವಿವಿಯ ವಿದ್ಯಾರ್ಥಿನಿಯರು ಬೇರೆಯವರಿಗೆ ಉದಾಹರಣೆಯಾಗಿ ಸಮಾಜಕ್ಕೆ ಮಾದರಿಯಾಗಬೇಕು. ವಿದ್ಯಾರ್ಥಿನಿಯರು ಅಭಿವೃದ್ಧಿ ಪಥದಲ್ಲಿ ಸಾಧಿಸಿ ಸುಸ್ಥಿರ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಮತ್ತು ಫೋಟೋಗ್ರಾಫಿ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಗಣ್ಯರು ಬಹುಮಾನವನ್ನು ವಿತರಿಸಿದರು.
ವಿವಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಡೀನರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರದರ್ಶಕ ಕಲೆಗಳ ಕೇಂದ್ರದ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಮತ್ತು ಮಹಿಳಾ ಗೀತೆ ಹಾಡಿದರು. ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲ್ಹಾರ ಅತಿಥಿಗಳನ್ನು ಪರಿಚಯಿಸಿದರು. ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಸಕ್ಪಾಲ್ ಹೂವಣ್ಣ ಹಾಗೂ ಡಾ. ಅಶ್ವಿನಿ ಕೆ.ಎನ್ ವರದಿ ವಾಚನ ಮಾಡಿದರು. ಡಾ.ಭಾರತಿ ಗಾಣಿಗೇರ ಕಾರ್ಯಕ್ರಮ ನಿರೂಪಿಸಿದರು. ವಸತಿ ನಿಲಯದ ಮುಖ್ಯ ನಿಲಯಪಾಲಕಿ ಪ್ರೊ.ಜ್ಯೋತಿ ಉಪಾಧ್ಯೆ ವಂದಿಸಿದರು.