ಅಂಗನವಾಡಿಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೧; ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು ಏಪ್ರಿಲ್ ನಿಂದ ಆಗಸ್ಟ್‍ವರೆಗೆ ಜಿಲ್ಲೆಯಲ್ಲಿ 35 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿವೆ. ಶಾಲೆ ಬಿಟ್ಟ ಮಕ್ಕಳ ವಿವರ ಸಂಗ್ರಹಿಸಿ, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ನಿಯಂತ್ರಣ ಸಾಧ್ಯವಾಗಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಅಪರ್ಣಾ ಎಂ.ಕೊಳ್ಳಾ ತಿಳಿಸಿದರು.ಅವರು  ವಿವಿಧ ಅಂಗನವಾಡಿ ಕೇಂದ್ರಗಳು, ಹಾಸ್ಟೆಲ್‍ಗಳಿಗೆ ಭೇಟಿ ನೀಡಿ ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಈ ಅವಧಿಯಲ್ಲಿ 35 ಬಾಲ್ಯ ವಿವಾಹ ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ ಮಕ್ಕಳ ರಕ್ಷಣಾ ಘಟಕದಿಂದ 32 ವಿವಾಹಗಳನ್ನು ತಡೆಗಟ್ಟಲಾಗಿದೆ. ಇದರಲ್ಲಿ 2 ಕ್ಕೆ ತಡೆ ತರಲಾಗಿದ್ದು 3 ಬಾಲ್ಯ ವಿವಾಹಗಳು ನಡೆದಿದ್ದು ಅವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಾಹಿತಿ ನೀಡಿದರು. ಈ ವೇಳೆ ಸದಸ್ಯರು ಮಾತನಾಡಿ ಬಾಲ್ಯ ವಿವಾಹಗಳು ನಡೆಯದಂತೆ ನೋಡಿಕೊಳ್ಳಬೇಕು, ಶಾಲೆ ಬಿಟ್ಟ ಮಕ್ಕಳ ಬಗ್ಗೆ ನಿಖರವಾದ ಅಂಕಿ ಅಂಶಗಳಿದ್ದಲ್ಲಿ ಇವೆಲ್ಲವನ್ನು ತಡೆಗಟ್ಟಬಹುದಾಗಿದ್ದು ಶಿಕ್ಷಣ ಇಲಾಖೆಯಲ್ಲಿ ನಿಖರವಾದ ಮಾಹಿತಿ ಲಬ್ಯವಾಗಬೇಕು. ಶಾಲೆ ಬಿಟ್ಟ ಮಕ್ಕಳ ವಿವರವನ್ನು ವರದಿ ಮಾಡದ ಅಂತಹ ಶಾಲಾ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲು ಮಾಡುವ ಎಚ್ಚರಿಕೆಯನ್ನು ನೀಡಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.