ಚಿಂಚೋಳಿ; ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಚಿಂಚೋಳಿ,ಆ.31- ಪಟ್ಟಣದ ಹೊರವಲಯದಲ್ಲಿರುವ ಸಿದ್ದಸಿರಿ ಇಥೆನಾಲ್ ಪವರ್ ಘಟಕ ಕಾರ್ಖಾನೆಯನ್ನು ಪ್ರಾರಂಭ ಮಾಡಲು ಕರ್ನಾಟಕ ಹೈ ಕೋರ್ಟ್ ಆದೇಶ ನೀಡಿದ್ದರೂ, ಕೂಡ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಿಎಫ್‍ಓ ಅನುಮತಿ ನೀಡದಿರುವುದನ್ನು ಖಂಡಿಸಿ ಅಖಿಲ ಭಾರತ ರೈತ ಹಿತ ರಕ್ಷಣಾ ಸಂಘದ ನೇತೃತ್ವದಲ್ಲಿ ಚಿಂಚೋಳಿ ಬಂದ್ ಗೆ ಕರೆ ನೀಡಿದ್ದ ಪ್ರತಿಭಟನೆಗೆ ಜನರಿಂದ ಮಿಶ್ರ ಪ್ರತಿಕ್ರಿಯೆ ದೊರೆಯಿತು.
ಕೆಲವೊಂದಷ್ಟು ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವಂತೆ ಗೋಚರಿಸಿದರೆ, ಇನ್ನು ಕೆಲವೊಂದಿಷ್ಟು ಅಂಗಡಿ ಮುಂಗಟ್ಟುಗಳು ಯಥಾ ಪ್ರಕಾರ ತೆರೆದಿಟ್ಟು ಯಾವ ಪ್ರತಿಭಟನೆಯಿದ್ದರೇನು ಇವತ್ತು ದುಡಿಯದೇ ಇದ್ರೆ ನಷ್ಟ ಆಗೋದು ನನಗೆ ಎನ್ನುವಂತೆ ಮಿಶ್ರ ಪ್ರತಿಕ್ರಿಯೆ ಕಂಡು ಬಂತು
ಪಟ್ಟಣದ ಬೀದರ ಕ್ರಾಸ್ ನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್ ನವರೆಗೂ ಶಾಸಕ ಡಾ.ಅವಿನಾಶ ಜಾಧವ ನೇತೃತ್ವದಲ್ಲಿ ನಡೆದ ಪಾದಯಾತ್ರೆಯ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದಸಿರಿ ಇಥೆನಾಲ್ ಘಟಕ ಪ್ರಾರಂಭ ಮಾಡದಂತೆ ತಡೆಯಲು ರಾಜಕೀಯವಾಗಿ ಅಧಿಕಾರಿಗಳನ್ನು ಈ ಸರ್ಕಾರ ಬಳಸಿಕೊಳ್ಳುತ್ತಿದೆ. ರೈತರ ವಿಷಯದಲ್ಲಿ ಸರ್ಕಾರ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಯಾವುದೇ ಸರ್ಕಾರವಿರಲಿ, ಎಲ್ಲ ಸರ್ಕಾರಗಳು ಮಾಡಬೇಕಾಗಿರುವ ಮೊಟ್ಟ ಮೊದಲ ಕೆಲಸ ಎಂದರೇ ಅದುವೇ ರೈತರ ಉದ್ದಾರ. ಆದರೇ ಅದೆಲ್ಲವನ್ನು ಬಿಟ್ಟು ರೈತರ ಕೃಷಿ ಜೀವನದ ಜೊತೆಗೆ ಆಟವಾಡುವಲ್ಲಿ ಸರ್ಕಾರ ಸಾಮಥ್ರ್ಯ ತೋರುತ್ತಿದೆ. ಪಕ್ಷಬೇಧ ಮರೆತು ಸರ್ಕಾರ ರೈತರ ಹಿತದೃಷ್ಟಿಯನ್ನು ಕಾಪಾಡಬೇಕೆಂದರೆ, ಸಿದ್ದಸಿರಿ ಇಥೆನಾಲ್ ಘಟಕ ಪ್ರಾರಂಭಗೊಳಿಸಿ ಎಂದು ಹೇಳಿದರು.
ಇನ್ನು ನೆನೆಗುದಿಗೆ ಬಿದ್ದಿದ್ದ ಸಕ್ಕರೆ ಕಾರ್ಖಾನೆಯನ್ನು ವಿಜಯಪುರದ ಬಸನಗೌಡ ಪಾಟೀಲ್ ಯತ್ನಾಳ್ ರವರು ಸಾಕಷ್ಟು ಅನುದಾನವನ್ನು ಹಾಕಿ ಈ ಭಾಗದ ರೈತರಿಗೆ, ಕೂಲಿ ಕಾರ್ಮಿಕರಿಗೆ ನೆರವಾಗಲು ಇಥೆನಾಲ್ ಘಟಕವನ್ನು ಪ್ರಾರಂಭಿಸಿದ್ದರು. ಅದಕ್ಕೆ ತಡೆಯೊಡ್ಡುವ ಕೆಲಸ ಕಾಂಗ್ರೇಸ ಸರ್ಕಾರ ಮಾಡಿದೆ. ಇಥೆನಾಲ್ ಘಟಕ ಪ್ರಾರಂಭ ಮಾಡದಿರಲು ಇಷ್ಟೆಲ್ಲಾ ತಡೆಯೊಡ್ಡುವ ಬದಲು ಸಚಿವ ಪ್ರಿಯಾಂಕ ಖರ್ಗೆ, ಡಾ.ಶರಣ ಪ್ರಕಾಶ ಪಾಟೀಲ ಹಾಗೂ ಈಶ್ವರ ಖಂಡ್ರೆ, ಸಾಗರ ಖಂಡ್ರೆ ನೀವೆಲ್ಲರೂ ಸೇರಿ ಈ ಭಾಗದ ರೈತರ ಸಲುವಾಗಿ, ಈ ಭಾಗದ ಆರ್ಥಿಕ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಜನರನ್ನು ಈ ಕ್ಷೇತ್ರವನ್ನು ದತ್ತು ತೆಗೆದುಕೊಂಡು ಉದ್ದಾರ ಮಾಡಿ ಎನ್ನುವ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಗೋಪಾಲ ರಾವ ಕಟ್ಟಿಮನಿ, ಮಾಲಿನ್ಯ ನಿಯಂತ್ರಣ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಸರ್ಕಾರ ಹಾಗೂ ಈಶ್ವರ ಖಂಡ್ರೆ ಆಟ ಆಡುತ್ತಿದ್ದಾರೆ.ಹಾಗೇ ನೋಡಿದರೆ ತಾಲೂಕಿನಲ್ಲಿರುವ ಸೋಲಾರ್ ಘಟಕ ಎಷ್ಟು ಮಾಲಿನ್ಯ ನಿಯಂತ್ರಣದಿಂದ ಕೂಡಿದೆ, ಸಿಮೆಂಟ್ ಕಾರ್ಖಾನೆ ಎಷ್ಟು ಮಾಲಿನ್ಯ ಹೊರಸೂಸುತ್ತಿದೆ.ಇದರ ಬಗ್ಗೆ ಯಾಕೆ ಮಾಲಿನ್ಯ ನಿಯಂತ್ರಣ ಮಂಡಳಿ ಗಮನ ಕೊಡುವುದಿಲ್ಲ.ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ನೇರವಾಗಿ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಸಂಜೀವನ ಯಾಕಾಪುರ ಮಾತನಾಡಿ, ಸಿದ್ದಸಿರಿ ಪ್ರಾರಂಭಿಸುವುದರಿಂದ ಕೇವಲ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೈತ ಬಾಂಧವರಿಗಷ್ಟೇ ಅಲ್ಲದೇ ಇನ್ನುಳಿದ ಹೋಟೆಲ್, ಪಂಚರ್ ಶಾಪ್ ಗಳಂತಹ ಅಂಗಡಿ ಮುಂಗಟ್ಟುಗಳನ್ನಿಟ್ಟುಕೊಂಡು ವ್ಯಾಪಾರ ವಹಿವಾಟು ಮಾಡುವ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿಯ ಮೇಲು ಪರಿಣಾಮ ಬೀರುತ್ತದೆ ಆದ್ದರಿಂದ ಸಾಧ್ಯವಾದಷ್ಟು ಬೇಗ ಸರ್ಕಾರ ಸಿದ್ದಸಿರಿ ಇಥೆನಾಲ್ ಘಟಕ ಪ್ರಾರಂಭಿಸಲು ಅನುಮತಿ ನಿಡಬೇಕೆಂದು ಆಗ್ರಹಿಸಿದರು. ಬಳಿಕ ತಾಲ್ಲೂಕಿನ ತಹಸೀಲ್ದಾರರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಪ್ರತಿಭಟನೆಗೆ ಡಿ.ವಾಯ್.ಎಸ್ಪಿ ಸಂಗಮನಾಥ ಹಿರೇಮಠ ಆದೇಶದಂತೆ, ಸಿಪಿಐ ಕಪಿಲ್ ದೇವ ನೇತೃತ್ವದಲ್ಲಿ ಪಿ.ಎಸ್.ಐ ಮಡಿವಾಳಪ್ಪ ಭಾಗೋಡಿ ಸೇರಿದಂತೆ ಇನ್ನಿತರ ಪೆÇಲೀಸ್ ಸಿಬ್ಬಂದಿಗಳು ತಮ್ಮ ಬಂದೋಬಸ್ತ್ ಕರ್ತವ್ಯದಲ್ಲಿ ಕಂಡು ಬಂದರು.
ಪ್ರತಿಭಟನೆಯಲ್ಲಿ ಶರಣಪ್ಪ ತಳವಾರ,ಜಗದೀಶ ಪಾಟೀಲ,ವಿಜಯಕುಮಾರ ಚೆಂಗಟಾ,ಕೆ.ಎಂ.ಬಾರಿ, ಶ್ರೀಮಂತ ಕಟ್ಟಿಮನಿ,ಅಮರ ಲೋಡ್ಡನೋರ ಸೇರಿದಂತೆ ಇನ್ನಿತರ ಬಿಜೆಪಿ ಪಕ್ಷದ ಕಾರ್ಯಕರ್ತರು, ಸಂಘಟಕರು ಪಾಲ್ಗೊಂಡಿದ್ದರು.