ಗೂಡ್ಸ್ ವಾಹನ ಕಳ್ಳನ ಬಂಧನ
ಕಲಬುರಗಿ,ಆ.31-ನಗರದ ಶರಣಬಸವೇಶ್ವರ ದೇವಸ್ಥಾನ ಹಿಂದುಗಡೆ ಮತ್ತು ಮದಿನಾ ಕಾಲೋನಿಯ ಈದ್ಗಾ ಲೇಔಟ್ ಹತ್ತಿರ ನಿಲ್ಲಿಸಲಾಗಿದ್ದ ಎರಡು ಗೂಡ್ಸ್ ವಾಹನಗಳನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ನಗರ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಬಾಗಲಕೋಟ ಜಿಲ್ಲೆಯ ಬೀಳಗಿಯ ರಫೀಕ್ ಶೇಖ್ ಅಲಿಯಾಸ್ ರಾಜು ತಂದೆ ರಹೇಮಾನ್ ಶೇಖ್ ಅಲಿಯಾಸ್ ಸಂತೋಷ ಕಾಟಕೆ (38) ಎಂಬಾತನನ್ನು ಬಂಧಿಸಿ 8 ಲಕ್ಷ ರೂ.ಮೌಲ್ಯದ ಟಾಟಾ ಎಸಿ ಗೂಡ್ಸ್ ವಾಹನ, 10.50 ಲಕ್ಷ ರೂ.ಮೌಲ್ಯದ ಅಶೋಕ ಲೈಲೆಂಡ್ ಗೂಡ್ಸ್ ವಾಹನ, 85 ಸಾವಿರ ರೂ.ಮೌಲ್ಯದ ಬೈಕ್ ಸೇರಿದಂತೆ 19.35 ಲಕ್ಷ ರೂ.ಮೌಲ್ಯದ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಗೂಡ್ಸ್ ವಾಹನ ಕಳ್ಳತನವಾದ ಬಗ್ಗೆ ಆಳಂದ ತಾಲ್ಲೂಕಿನ ಕಮಲಾನಗರದ ಸಂತೋಷ ಸಾಗರ ಮತ್ತು ಯಾದಗಿರಿ ಜಿಲ್ಲೆಯ ಮುಂಡರಗಿ ಗ್ರಾಮದ ಚಾಂದ ಪಟೇಲ್ ಅವರು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಉಪ ಪೊಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ, ರಾಘವೇಂದ್ರ ನಗರ ಪೊಲೀಸ್ ಠಾಣೆ ಪಿಐ ಕುಬೇರ ರಾಯಮಾನೆ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಲ್ಲನಗೌಡ, ರಾಜಕುಮಾರ, ಸಿಕ್ರೇಶ್ವರ, ಅರೇಶ, ಆತ್ಮಕುಮಾರ ಅವರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಗೂಡ್ಸ್ ವಾಹನ, ಬೈಕ್ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗೂಡ್ಸ್ ವಾಹನ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಅವರು ಶ್ಲಾಘಿಸಿದ್ದಾರೆ.