ಸಹಕಾರ ಸಂಘಗಳು ಜನರಿಗೆ ಅತ್ಯಂತ ಪ್ರಯೋಜನಕಾರಿ: ಶಂಕರಗೌಡ ಸೋಮನಾಳ
ವಿಜಯಪುರ,ಆ.31: ಸಹಕಾರ ಸಂಘಗಳು ಕೃಷಿ ಕ್ಷೇತ್ರ ಹಾಗೂ ಜನ ಸಾಮಾನ್ಯರಿಗೆ ಅತ್ಯಂತ ಉಪಯುಕ್ತವಾಗಿದ್ದು, ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಇವರ ಸಹಯೋಹಗದಲ್ಲಿ ಗುರುವಾರ ಆಯೋಜಿಸಿದ್ದ ಸಹಕಾರ ತತ್ವದ ಕುರಿತ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗೆ ಅಂತರ್ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹಾಗೂ ಅವರ ಜೀವನ ಮಟ್ಟವನ್ನು ಅಭಿವೃದ್ಧಿಪಡಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಗಣನೀಯವಾಗಿದೆ ಎಂದರು.
ಈ ಚರ್ಚಾ ಸ್ಪರ್ಧೆಯಲ್ಲಿ ಮುಧೋಳದ ದಾನಮ್ಮದೇವಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಸ್ನಾತಕ ವಿಭಾಗದ ವಿದ್ಯಾರ್ಥಿನಿ ದಾನೇಶ್ವರಿ ಅರಗಂಜಿ (ಪ್ರಥಮ ಸ್ಥಾನ), ಕಲಬುರ್ಗಿಯ ಶರಣೇಶ್ವರಿ ರೇಷ್ಮಿ ಮಹಿಳಾ ಮಹಾವಿದ್ಯಾಲಯ ಅನಿತಾ (ದ್ವಿತೀಯ ಸ್ಥಾನ) ಹಾಗೂ ಮಹಿಳಾ ವಿವಿಯ ಸ್ನಾತಕ ವಿಭಾಗದ ಪವಿತ್ರಾ ಬಡಿಗೇರ (ತೃತೀಯ ಸ್ಥಾನ) ಪಡೆದುಕೊಂಡರು. ಮಹಿಳಾ ವಿವಿಯ ಸ್ನಾತಕೋತ್ತರ ಇಂಗ್ಲೀಷ್ ಅಧ್ಯಯನ ವಿಭಾಗದ ಪ್ರಿಯಾಂಕ ಪಾಟೀಲ (ಪ್ರಥಮ ಸ್ಥಾನ), ನೇಹಾ ಎನ್.ಡಿ (ದ್ವಿತೀಯ ಸ್ಥಾನ) ಹಾಗೂ ಕನ್ನಡ ಅಧ್ಯಯನ ವಿಭಾಗದ ಸಾವಿತ್ರಿ ತೆಲಗಿ (ತೃತೀಯ ಸ್ಥಾನ) ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಚರ್ಚಾ ಸ್ಪರ್ಧೆಯ ನಿರ್ಣಾಯಕರಾಗಿದ್ದ ಪ್ರೊ.ಪಿ.ಜಿ. ತಡಸದ ಹಾಗೂ ಮುಖ್ಯ ನಿರ್ವಹಣಾಧಿಕಾರಿ ಸಹಕಾರ ಮಹಾಮಂಡಳ ನಿಯಮಿತ ಸವಿತಾ ಬಿಸನಾಳ ವಿದ್ಯಾರ್ಥಿನಿಯರಿಗೆ ಸಲಹೆ ಸೂಚನೆಗಳನ್ನು ನೀಡಿದರು. ವಿದ್ಯಾರ್ಥಿನಿ ಕ್ಷೇಮಪಾಲನ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಶಾಂತಾದೇವಿ ಟಿ, ಸಹಾಯಕ ನಿರ್ದೇಶಕಿ ಡಾ. ಅಶ್ವಿನಿ ಕೆ.ಎನ್. ವಿವಿಧ ವಿಭಾಗಗಳ ಪ್ರಾಧ್ಯಾಪಕರು ಮತ್ತಿತರರು ಉಪಸ್ಥಿತರಿದ್ದರು.