ರೈತಪರ ಸಂಶೋಧನೆಗಳಾಗಲಿ: ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ. ಎಲ್. ಪಾಟೀಲ ಆಶಯ
ವಿಜಯಪುರ,ಆ. 31: ಕೃಷಿ ವಿಜ್ಞಾನಿಗಳು ತಾವು ಕೈಗೊಂಡ ಸಂಶೋಧನೆಗಳು ರೈತರು ಅಳವಡಿಸಿಕೊಳ್ಳುವಂತಿರಬೇಕು, ಅಧಿಕ ಇಳುವರಿ ನೀಡುವಂತದ್ದಾಗಿರಬೇಕು ಮತ್ತು ಕಡಿಮೆ ವೆಚ್ಚದ ತಾಂತ್ರಿಕತೆಗಳಿರಬೇಕೆಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
ಶುಕ್ರವಾರ ವಿಜಯಪುರ ಕೃಷಿ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ವಲಯ ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯೆ ಹೆಚ್ಚಳದ ಹಿನ್ನಲೆಯಲ್ಲಿ ಮತ್ತು ಸಾಗುವಳಿ ಜಮೀನ ಕಡಮೆಯಾಗುತ್ತಿರುವ ಸಂದರ್ಭದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ವಿಜ್ಞಾನಿಗಳ ಮೇಲೆ ಅನೇಕ ಸವಾಲುಗಳಿವೆ. ಅವುಗಳು ಸುಸ್ಥಿರ ಕ್ರಮಗಳನ್ನಳವಡಿಸಿ, ಅತಿಯಾದ ರಸಾಯನಿಕ ಬಳಕೆ ಕಡಿಮೆ ಮಾಡಿ, ವಾತಾವರಣಕ್ಕೆ ಪೂರಕವಾಗಿರಬೇಕು ಎಂದರು.
ನಮ್ಮ ವಿಶ್ವವಿದ್ಯಾಲಯದಲ್ಲಿ ಬೋಧನೆ, ಸಂಶೋಧನೆ, ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸಂಶೋಧನೆ ಮತ್ತು ವಿಸ್ತರಣೆಯ ನಡುವಿನ ಅಂತರ ಕಡಿಮೆಗೊಳಿಸಿ, ತಾಂತ್ರಿಕ ವರ್ಗಾವಣೆ ಕೇಂದ್ರಗಳಾದ ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಕೇಂದ್ರಗಳನ್ನು ಬಲಗೊಳಿಸಬೇಕಾಗಿದೆ. ನಮ್ಮ ವಿಶ್ವವಿದ್ಯಾಲಯದ ಸಾಧನೆ ಉತ್ತಮ ಕೃಷಿ ತಾಂತ್ರಿಕತೆಗಳನ್ನು ಅಭಿವೃದ್ಧಿಗೊಳಿಸುವದರ ಮೇಲೆ ನಿಂತಿದೆ. ಆದ್ದರಿಂದ ಸಮಗ್ರ ವಿಧಾನಗಳ ಮೂಲಕ ರೈತರ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದರು.
ವಿಶ್ವವಿದ್ಯಾಲಯದಿಂದ ವಿಜ್ಞಾನಿಗಳ ನಡೆ ರೈತರ ಕಡೆ, ಒಂದು ವಿಜ್ಞಾನಿ-ಒಬ್ಬ ರೈತ, ಕೃಷಿ ಶೋಧನೆ, ಸಾಧನೆ ಕೆವಿಕೆಗಳಿಂದ ದತ್ತು ಗ್ರಾಮದ ಸಮಗ್ರ ವಿಸ್ತರಣಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಮೂಲಕ ರೈತರಿಗೆ ಇನ್ನೂ ಹತ್ತಿರವಾಗುವಂತೆ ಧಾರವಾಡ ಕೃಷಿ ವಿವಿ ಬೆಳೆಸೋಣ ಎಂದರು.
ಸಂಶೋಧನಾ ನಿರ್ದೇಶಕ ಡಾ. ಬಿ. ಡಿ. ಬಿರಾದಾರ ಮಾತನಾಡಿ, ವಿಜ್ಞಾನಿಗಳಿಗೆ ಸಂಶೋಧನೆ ಕೈಗೊಳ್ಳಲು ಅಗತ್ಯ ಹಣಕಾಸಿನ ನೆರವು, ಸಾಧನೆಗೈದ ವಿಜ್ಞಾನಿಗೆ ಪ್ರೋತ್ಸಾಹ ಧನ, ಪ್ರಶಸ್ತಿ ನೀಡಲಾಗುತ್ತಿದೆ. ಒಬ್ಬ ವಿಜ್ಞಾನಿಗೆ ಒಂದು ಬಾಹ್ಯ ಯೋಜನೆ, ಸಂಶೋಧನೆ ಫಲಿತಾಂಶಗಳನ್ನು ಅತ್ಯುನ್ನತ ಜರ್ನಲ್‍ಗಳಲ್ಲಿ ಪ್ರಕಟಿಸಿದರೆ ಯೋಜನೆಗೆ ಹಣಕಾಸು ಮಂಜೂರಾತಿ ನೀಡಲಾಗುತ್ತದೆ ಮತ್ತು ವಿಶ್ವವಿದ್ಯಾಲಯಗಳ ಅಧೀನದಲ್ಲಿ ಬರುವ ಪ್ರತಿ ಸಂಶೋಧನಾ ಕೇಂದ್ರಗಳಲ್ಲಿರುವ ಜಮೀನಿಗೆ ಶೇ. 50 ರಷ್ಟು ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರ, ಹಾಕಲು ತಿಳಿಸಲಾಗಿದೆ. ಉನ್ನತ ಮಟ್ಟದ ಸಂಶೋಧನೆಗೆ ಹಲವಾರು ಸಲಹೆ ನೀಡಿದರು.
ವಿಸ್ತರಣಾ ನಿರ್ದೇಶಕ ಡಾ. ಎಸ್. ಎಸ್. ಅಂಗಡಿ ಧಾರವಾಡ ಕೃಷಿ ವಿವಿ ವ್ಯಾಪ್ತಿಯಲ್ಲಿ ಬರುವ ವಿವಿಧ ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳು ಹಮ್ಮಿಕೊಂಡಿರುವ ವಿವಿಧ ವಿಸ್ತರಣಾ ಚಟುವಟಿಕೆಗಳ ಕುರಿತು ಮಾಹಿತಿ ತಿಳಿಸಿದರು. ವಿಜಯಪುರ ಮತ್ತು ಸಹ ಸಂಶೋಧನಾ ನಿರ್ದೇಶಕರಾದ ಡಾ. ಅಶೋಕ ಎಸ್. ಸಜ್ಜನ, ಡಾ. ಪಿ.ಎಸ್. ಮತ್ತಿವಾಡೆ, ಸಹ ವಿಸ್ತರಣಾ ನಿರ್ದೇಶಕÀ ಡಾ. ರವೀಂದ್ರ ಬೆಳ್ಳಿ ಮತ್ತು ಡಾ. ಎಸ್. ಎ. ಗದ್ದನಕೇರಿ ವಲಯ ಮೂರರಲ್ಲಿ ಹಮ್ಮಿಕೊಂಡ ವಿವಿಧ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳ ವರದಿ ಮಂಡಿಸಿದರು.
ಡಾ. ಅಶೋಕ ಎಸ್. ಸಜ್ಜನ ಸ್ವಾಗತಿಸಿದರು. ಡಾ. ಅಶ್ವತ್ಥಾಮ ನಿರೂಪಿಸಿದರು. ಡಾ. ಆರ್. ಬಿ. ಬೆಳ್ಳಿ ವಂದಿಸಿದರು.
ಹಿಂದಿನ ಕುಲಪತಿ ಡಾ. ವ್ಹಿ. ಐ. ಬೆಣಗಿ, ವಿದ್ಯಾಧಿಕಾರಿ ಡಾ. ಎ. ಭೀಮಪ್ಪ, ಡಾ. ಎಸ್. ಬಿ. ಕಲಘಟಗಿ, ಡಾ. ಎಚ್. ಬಿ. ಪಾಟೀಲ, ಕಾರ್ಯಾಗಾರದಲ್ಲಿ ವಿವಿಧ ವಿಷಯ ಪರಿಣಿತರು, ವಿವಿಧ ವಿಭಾಗಗಳ ಮುಖ್ಯಸ್ಥರು, ಧಾರವಾಡ ಕೃಷಿ ವಿವಿ ವ್ಯಾಪ್ತಿಯ ಅಖಿಲ ಭಾರತ ಸಮನ್ವಿಯತ ಯೋಜನೆ ಮುಖ್ಯಸ್ಥರು, ತಂತ್ರಜ್ಞಾನ ವರ್ಗಾವಣೆ ಕೇಂದ್ರಗಳ ಮುಖ್ಯಸ್ಥರು, ವಿಜ್ಞಾನಿಗಳು ಉದ್ಘಾಟಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.