ಮಠ, ಪೀಠ ಬಿಡುತ್ತೇನೆ 2ಎ ಮೀಸಲಾತಿ ಹೋರಾಟ ಕೈ ಬಿಡಲ್ಲ : ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಶಪಥ
ವಿಜಯಪುರ,ಆ.31:ಪಂಚಮಸಾಲಿ ಸಮಾಜದ ಮಕ್ಕಳ ಶಿಕ್ಷಣ ಮತು ್ತಉದ್ಯೋಗಕ್ಕಾಗಿ ರಾಜ್ಯದಲ್ಲಿ 2ಎ ಮೀಸಲಾತಿ, ಹಾಗೂ ಕೇಂದ್ರದಲ್ಲಿ ಓಬಿಸಿ ಪಟ್ಟಿಗೆ ಸೇರಿಸುವವರೆಗೆ ಮಠ ಪೀಠ ಬಿಡುತ್ತೇನೆ ಹೊರತು, 2ಎ ಮೀಸಲಾತಿ ಹೋರಾಟವನ್ನು ಕೈ ಬಿಡುವುದಿಲ್ಲವೆಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಜ್ಞೆಗೈದರು.
ಐಶ್ವರ್ಯ ನಗರದ ರಾಣಿಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡ ಜಿಲ್ಲಾ ಪಂಚಮಸಾಲಿ ವಕೀಲರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿವಿಧ ರೀತಿಯ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆನ್ನುವ 6 ಹಂತದ ಹೋರಾಟಗಳು ಮುಗಿದಿದ್ದು, 7ನೆ ಹಂತದ ಹೋರಾಟ ವಕೀಲರ ಮುಂದಾಳತ್ವದಲ್ಲಿ ಕಾನೂನಿನ ಬಲ ತುಂಬಲು ನೇತೃತ್ವ ವಹಿಸಲಾಗಿದೆ. ಯಾವುದೇ ಪಕ್ಷದ ಸಮುದಾಯದ ಶಾಸಕರು, ನಿರೀಕ್ಷಿತ ಮಟ್ಟದಲ್ಲಿ 2ಎ ಮೀಸಲಾತಿಗಾಗಿ ಹೋರಾಟ ಮಾಡದ ಹಿನ್ನೆಲೆಯಲ್ಲಿ ಬೇಸರಗೊಂಡ ಹೋರಾಟದ ಮುಖಂಡತ್ವ ವಹಿಸಿರುವ ಕೂಡಲ ಸಂಗಮದ ಪಂಚಮಸಾಲಿ ಶ್ರೀ ಪೀಠದಜಯಮೃತ್ಯುಂಜಯ ಸ್ವಾಮೀಜಿತಮ್ಮ ಸಮುದಾಯದ ವಕೀಲರ ಮೂಲಕ ಹೋರಾಟ ಯಶಸ್ವಿಗೊಳಿಸಲು ತೀರ್ಮಾನಿಸಿದ್ದಾರೆ.
ಇನ್ನು ಮುಂದೆ ಕಾನೂನಿನ ಮೂಲಕ ವಕೀಲರ ಮುಖಾಂತರ ನ್ಯಾಯಾಂಗ ಹೋರಾಟ ಕೈಗೊಳ್ಳಲಾಗುವುದಲ್ಲದೇ ಕಳೆದ ಅಧಿವೇಶನದಲ್ಲಿ ಸಮುದಾಯದ ಶಾಸಕರು, ಮೀಸಲಾತಿಗಾಗಿ ಹೋರಾಟ ಮಾಡುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಅಧಿವೇಶನದಲ್ಲಿ ಯಾವ ಶಾಸಕರು, ಇಚ್ಛಾಶಕ್ತಿ ತೋರದ ಹಿನ್ನೆಲೆಯಲ್ಲಿ ಸದನದಲ್ಲಿ ಈ ವಿಷಯ ಚರ್ಚೆಗೆ ಬರಲಿಲ್ಲ. ಕಾರಣ ವಕೀಲರ ಮುಖಾಂತರ ಸಭೆ ನಡೆಸಿ ಕಾನೂನು ಮೂಲಕ ಮುಖ್ಯಮಂತ್ರಿಗಳ ಮನವೊಲಿಸುವ ಕಾರ್ಯ ಮಾಡಲಾಗುವುದು ಎಂದರು.
ಈ ಹಿಂದೆ ಎಲ್ಲ ಸಚಿವರು ಶಾಸಕರು ಇಚ್ಛಾಶಕ್ತಿ ತೋರದ ಕಾರಣ ಹಿಂದಿನ ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿ ಕೈ ತೊಳೆದುಕೊಂಡಿತ್ತು, ಅದು ನ್ಯಾಯಾಂಗದ ಅಂಗಳದಲ್ಲಿರುವ ಕಾರಣ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ. ಈಗ ವಕೀಲರ ಮೂಲಕ ತಜ್ಞರ ವಕೀಲರ ಸಮಿತಿ ರಚಿಸಿ ನ್ಯಾಯಂಗದ ಮೂಲಕ ಹೋರಾಟ ಮಾಡಿ ನಮ್ಮ ಹಕ್ಕನ್ನು ಪಡೆಯುವ ತೀರ್ಮಾನಕ್ಕೆ ಬರಲಾಗಿದೆ. ರಾಜ್ಯ ಮಟ್ಟದಲ್ಲಿ ವಕೀಲರ ಪರಿಷತ್, ಶೀಘ್ರದಲ್ಲಿಯೇ ರಚನೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗಣ್ಯ ನ್ಯಾಯವಾದಿಗಳಾದ ಸಂಗಮೇಶ ಡೋಂಗರಗಾಂವ, ಸಂಗನಗೌಡ ಪಾಟೀಲ ಹೆಗಡ್ಯತಾಳ, ಎಸ್.ಎಸ್. ಮೂಡಲಗಿ, ಜಿ.ಟಿ. ಕೋಳೂರ, ಭುವನೇಶ್ವರಿ ಅಲಗೊಂಡ, ಸಿದ್ದನಗೌಡ ಪೋಲಿಸಪಾಟೀಲ, ಎಸ್.ಬಿ. ಪಾಟೀಲ (ಗುಂದಗಿ,) ದಾನಪ್ಪಗೌಡ ಚನ್ನಗೊಂಡ, ಬಿ.ಜಿ. ನೆಲ್ಲಗಿ, ಎಮ್.ಎಸ್. ಪಾಟೀಲ ಕೋರಳ್ಳಿ, ಬಿ.ಬಿ. ಬಿರಾದಾರಜೇವೂರ, ವಿ.ಎನ್. ಪಾಟೀಲ, ಆರ್.ಎಸ್. ಹಳ್ಳಿ, ವಿದ್ಯಾರಾಣಿ ತುಂಗಳ, ರವಿ ಖಾನಾಪೂರ, ಶಿವರಾಯಗೌಡ ಬಿರಾದಾರ, ಬಸವರಾಜ ಸಾವಳಗಿ, ಈರಣ್ಣ ಗಾಳಿ, ವಿಜಯ ಪಾಟೀಲ, ಬಾಬು ಹಿಪ್ಪರಗಿ, ವಿಕಾಸ ಬಿರಾದಾರ, ಕಲಾ ಉಮರಾಣಿ, ಶಾಮಲಾ ಗೋಲಾಯಿ, ಎಮ್.ಎಸ್. ಅಂದೊಡಗಿ, ಬಿ.ವಿ. ಬಿರಾದಾರ ಇಂಡಿ, ದಾನೇಶ ಅವಟಿ, ಸಮಾಜದ ಹಿರಿಯರಾದ ಎಮ್.ಎಸ್. ರುದ್ರಗೌಡರ, ಶ್ರೀಶೈಲ ಬುಕ್ಕಣ್ಣಿ, ಸುನೀಲಗೌಡ ಸೊಲಾಪೂರ, ಉಮಾ ಪಾಟೀಲ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಈ ಸಭೆಯಲ್ಲಿ ವಿಜಯಪುರ, ಸಿಂದಗಿ, ಇಂಡಿ, ಬಸವನ ಬಾಗೇವಾಡಿ, ಅಥಣಿ, ಜಮಖಂಡಿಯಿಂದ ಆಗಮಿಸಿದ ಹಲವಾರು ವಕೀಲರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ವಕೀಲರ ಸಲಹಾ ಸಮಿತಿ ಸದಸ್ಯರಾಗಿ ಹಿರಿಯ ನ್ಯಾಯವಾದಿಗಳಾದ ಸಂಗಮೇಶ ಡೊಂಗರಗಾಂವ, ಎಸ್.ಬಿ. ಪಾಟೀಲ ಹೆಗಡಿಹಾಳ, ಜಿ.ಬಿ. ಕೋಳೂರ, ಎಸ್.ಎಸ್. ಮೂಡಲಗಿ, ಬಿ.ಜಿ. ನೆಲ್ಲಗಿ ಸಿಂದಗಿ, ಬಿ.ಬಿ. ಬಿರಾದಾರ ಇಂಡಿ, ಭುವನೇಶ್ವರಿ ಅಲಗೋಂಡ, ಮಾಧ್ಯಮ ವಕ್ತಾರರನ್ನಾಗಿ ದಾನೇಶ ಅವಟಿ ಇದ್ದರು.
ನ್ಯಾಯವಾದಿ ಶ್ರೀಶೈಲ ಮುಳಜಿ ಸ್ವಾಗತಿಸಿದರು. ಭುವನೇಶ್ವರಿ ಅಲಗೊಂಡ ನಿರೂಪಿಸಿದರು. ಸಿದ್ದನಗೌಡ ಪೊಲೀಸ್ ಪಾಟೀಲ ವಂದಿಸಿದರು.