ಪಡಿತರ ಚೀಟಿಗಳನ್ನು ರದ್ದು ಮಾಡದೇ ಯಥಾ ಸ್ಥಿತಿಯಲ್ಲಿ ಮುಂದುವರೆಸಲು ಒತ್ತಾಯ
ಚಿತ್ತಾಪುರ; ಆ.31:ರಾಜ್ಯದ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್’ಗಳಿಗೆ ಆದಾಯ ಹೆಚ್ಚಿಗೆ ಇರುತ್ತವೆಂದು ಹೇಳಿ ಪಡಿತರ ಫಲಾನುಭವಿಗಳಲ್ಲಿ ಗೊಂದಲ ಉಂಟು ಮಾಡುತ್ತಿರುವ ಕುರಿತು ಹಾಗೂ ಪಡಿತರ ಚೀಟಿಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡದೇ ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಒತ್ತಾಯಿಸಿ ತಾಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿದೊದ್ದೇಶ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರವು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್’ಗಳಲ್ಲಿರುವ ಕುಟುಂಬಸ್ಥರ ಆದಾಯವನ್ನು ಒಗ್ಗೂಡಿಸಿ ಆದಾಯ ಮೀತಿ ಹೆಚ್ಚಾಗಿರುವ ಕಾರ್ಡ್’ಗಳನ್ನು ಎಪಿಎಲ್ ಕಾರ್ಡ್ ಮಾಡಲು ಮುಮದಾಗಿರುವುದರಿಂದ ಬಡ ಕುಟುಂಬಗಳಿಗೆ ತುಂಬಾ ತೊಂದರೆಯಾಗುತ್ತದೆ. ತಾಲೂಕಿನಲ್ಲಿ ಹೆಚ್ಚಿನ ಜನರು ಕೃಷಿ ಚಟುವಟಿಕೆ ಮತ್ತು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಬಹುಪಾಲು ಜನರು ಬಡತನ ರೇಖೆಗಿಂತ ಕೆಳಗಿನವರೇ ಇದ್ದಾರೆ. ಇದೀಗ ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬದವರ ಕಾರ್ಡ್’ನಲ್ಲಿ ಇದ್ದವರ ಸದಸ್ಯರ ಆದಾಯವನ್ನು ಪರಿಗಣಿಸಿ ಆದಾಯ ಹೆಚ್ಚಾಗಿರುವ ಕುಟುಂಬದ ಬಿಪಿಎಲ್ ಕಾರ್ಡ್’ಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡ್ ಮಾಡಲು ಮುಮದಾಗಿರುವುದು ಸರಿಯಲ್ಲ ಎಂದು ಅಗ್ರಹಿಸಿದರು.
ಕುಟುಂಬದಲ್ಲಿ ಒಬ್ಬರು ಮಾತ್ರ ಕೂಲಿ ಮಾಡಿ ಕುಟುಂಬ ನಿರ್ವಾಹಣೆ ಮಾಡುತ್ತಾರೆ. ಇನ್ನೂಳಿದ ಮಕ್ಕಳು ತಮ್ಮ ಶಾಲೆಯ ದಾಖಲಾತಿಗಾಗಿ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಕೊಡುತ್ತಾರೆ. ಅವನು ತಮ್ಮ ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ ಕೊಟ್ಟಿರುತ್ತಾನೆ. ಇದೀಗ ಸರ್ಕಾರವು ಅಂತವರ ಆದಾಯವನ್ನು ಪರಿಗಣಿಸಲು ಮುಂದಾಗಿರುವುದು ಶೋಚನೀಯ. ಆದ್ದರಿಂದ ಇಂತಹ ಆದೇಶ ಹೊರಡಿಸದೇ ಯಥಾ ಸ್ಥಿತಿಯನ್ನು ಮುಂದುವರೆಸಬೇಕು. ಇದೀಗ ನೀಡುತ್ತಿರುವ ಪಡಿತರದಲ್ಲಿ ಬರೀ ಅಕ್ಕಿಯನ್ನು ಮಾತ್ರ ನೀಡುತ್ತಿದ್ದು, ಅಕ್ಕಿಯ ಜೊತೆ ಗೋಧಿ, ಜೋಳಾ, ಎಣ್ಣೆ, ಸಕ್ಕರೆ, ತೊಗರಿ ಬೆಳೆ ಹಂಚಿಕೆ ಮಾಡುವ ಕಾರ್ಯಕ್ರಮವನ್ನು ಕೂಡಲೇ ಆರಂಭಿಸಿ ಬಿಪಿಎಲ್ ಕುಟುಂಬಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲ್ಲಿನಾಥ ಪಾಟೀಲ್ ಕೊರವಿ, ರವೀಂದ್ರ ತೇಲಕರ, ನರೇಂದ್ರ ಕುಲಕರ್ಣಿ, ನರಹರಿ ಕುಲಕರ್ಣಿ, ಈಶ್ವರಪ್ಪ ಪೂಜಾರಿ, ಸುಭಾಶ್ಚಂದ್ರ ಪವಾರ್, ಸಿದ್ರಾಮಪ್ಪ ಭೈರಿ, ಜೈನೋದ್ದೀನ್, ನಬಿಸಾಬ ಆಡಕಿ, ಹಣಮಂತ ಬೊಮ್ಮನಳ್ಳಿ, ಮಲ್ಲೇಶಿ ಹುಂಡೇಕಾರ, ಶೇಖ ಮಶಾಖ, ಅಕ್ರಂ ಪಟೇಲ್, ಗುಡು ಪಟೇಲ್ ಇದ್ದರು.