ನರೇಗಾದಡಿ ದಾಳಿಂಬೆ ಬೆಳೆದ ರೈತನಿಗೆ ಭರ್ಜರಿ ಲಾಭ
ಕೋಲಾರ,ಆ,೩- ನರೇಗಾದಡಿಯಲ್ಲಿ ದಾಳಿಂಬೆ ಬೆಳೆದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಹುಳದೇನಹಳ್ಳಿ ರೈತ ಚಂದ್ರಶೇಖರ್, ಈಗ ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದಾರೆ. ಹಿಂದಿನಿಂದಾಲೂ ಸಾಂಪ್ರದಾಯಿಕ ತರಕಾರಿ ಬೆಳೆಗಳನ್ನು ಬೆಳೆದು ಕೇವಲ ನಷ್ಟವನ್ನೇ ಅನುಭವಿಸುತ್ತಿದ್ದ, ಚಂದ್ರಶೇಖರ್‌ರವರಿಗೆ ದಾಳಿಂಬೆ ಬೆಳೆ ಕೈಹಿಡಿದಿದ್ದು, ಮೊದಲ ಫಸಲಿನಲ್ಲೇ ಭರ್ಜರಿ ಲಾಭದ ಭರವಸೆ ಮೂಡಿಸಿದೆ.
ಚಂದ್ರಶೇಖರ್ ತಮ್ಮ ಜಮೀನಿನಲ್ಲಿ ಟೊಮೆಟೋ, ಬೀನ್ಸ್ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತಿದ್ದರು. ಆದರೆ ಅವರ ಪರಿಶ್ರಮಕ್ಕೆ ತಪ್ಪ ಪ್ರತಿಫಲ ಸಿಗುತ್ತಿರಲಿಲ್ಲ. ಒಮ್ಮೆ ತರಕಾರಿಗೆ ಬೆಲೆ ಇದ್ದರೆ, ಮತ್ತೊಮ್ಮೆ ಬೆಲೆ ಕುಸಿತದಿಂದ ನಷ್ಟಕ್ಕೆ ಗುರಿಯಾಗುತ್ತಿದ್ದರು. ಇದರಿಂದ ಬೇಸತ್ತಿದ್ದ ರೈತ ಚಂದ್ರಶೇಖರ್, ಲಾಭ ಗಳಿಸುವ ಉದ್ದೇಶದಿಂದ ಪರ್ಯಾಯ ಬೆಳೆ ಬೆಳೆಯಬೇಕೆಂಬ ನಿರ್ಧಾರ ಮಾಡುತ್ತಾರೆ.
ಚಂದ್ರಶೇಖರ್‌ರವರ ನಿರ್ಧಾರಕ್ಕೆ ನೀರೆರೆದಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ. ನರೇಗಾದಡಿ ತೋಟಗಾರಿಕಾ ಬೆಳೆ ದಾಳಿಂಬೆಗೆ ಸಹಾಯಧನ ದೊರೆಯುತ್ತದೆ ಎಂಬ ಮಾಹಿತಿ ತಿಳಿದು, ತಕ್ಷಣ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಕಾಮಗಾರಿಯನ್ನು ಕ್ರಿಯಾ ಯೋಜನೆಗೆ ಸೇರಿಸುತ್ತಾರೆ.
ಎರಡುವರೆ ಜಮೀನಿನಲ್ಲಿ ೧೦ ಅಡಿ ಅಂತರದಲ್ಲಿ ಸಾಲು ಮಾಡಿ, ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿಯನ್ಜು ಹದ ಮಾಡಿಕೊಳ್ಳುತ್ತಾರೆ, ಬೆಂಗಳೂರಿನಿಂದ ಒಂದಕ್ಕೆ ೫೦ ರೂ. ಕೊಟ್ಟು ೧೦೦೦ ಸಸಿಗಳನ್ನು ತಂದು ನಾಟಿ ಮಾಡುತ್ತಾರೆ. ದಾಳಿಂಬೆ ತೋಟಕ್ಕೆ ಹನಿ ನೀರಾವರಿ ವ್ಯವಸ್ಥೆ ಕೂಡ ಮಾಡುತ್ತಾರೆ. ಒಂದೊವರೆ ವರ್ಷ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಲಹೆ, ಸೂಚನೆ ಪಡೆದು, ದಾಳಿಂಬೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ನರೇಗದಡಿಯಲ್ಲಿ ೯೦ ಸಾವಿರ ಧನ ಸಹಾಯ ಪಡೆದಿದ್ದಾರೆ.
ಸದ್ಯ ಈಗ ದಾಳಿಂಬೆ ಮೊದಲ ಫಸಲು ಬಂದಿದೆ. ದಾಳಿಂಬೆಗೆ ಮಾರುಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಉತ್ತಮ ಗುಣ ಮಟ್ಟದ ಹಣ್ಣು, ಕೆಜಿಗೆ ೩೦೦ ರೂಪಾಯಿವರೆಗೂ ಮಾರಾಟವಾಗುತ್ತಿದೆ. ಪ್ರತಿ ಸಸಿಯಲ್ಲೂ ೫೦ ರಿಂದ ೮೦ ಹಣ್ಣು ಇದ್ದು, ಈ ವರ್ಷ ಸುಮಾರು ೧೫ ಟನ್ ದಾಳಿಂಬೆ ದೊರೆಯಲಿದೆ. ಮಾರುಕಟ್ಟೆಯಲ್ಲಿ ಹಣ್ಣಿನ ಗುಣಮಟ್ಟದ ಮೇಲೆ ಬೆಲೆ ನಿಗದಿಯಾಗುತ್ತಿದ್ದು, ಇವರ ಹಣ್ಣಿಗೆ ಕೆಜಿಗೆ ೨೦೦ ರೂಪಾಯಿ ಬೆಲೆ ಸಿಗುವ ಸಾಧ್ಯತೆ ಇದ್ದು ಒಟ್ಟು ೩ ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.